ಬೆಳಿಗ್ಗೆ 9:15ರೊಳಗೆ ಕಚೇರಿಯಲ್ಲಿರಿ ಅಥವಾ ಅರ್ಧ ದಿನ ಸಾಂದರ್ಭಿಕ ರಜೆ ಕಳೆದುಕೊಳ್ಳಿ: ತನ್ನ ನೌಕರರಿಗೆ ಕೇಂದ್ರ ಸರಕಾರದ ಎಚ್ಚರಿಕೆ
Photo: X/@DoPTGoI)
ಹೊಸದಿಲ್ಲಿ: ದಿನವೂ ಕಚೇರಿಗೆ ತಡವಾಗಿ ಬರುವ ಕೇಂದ್ರ ಸರಕಾರದ ನೌಕರರಿಗೆ ಚಾಟಿ ಬೀಸಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ತೀರ ತಡವೆಂದರೂ ಬೆಳಿಗ್ಗೆ 9:15ರೊಳಗೆ ಕಚೇರಿಯಲ್ಲಿದ್ದು,ಹಾಜರಾತಿ ದಾಖಲಿಸುವಂತೆ ದೇಶಾದ್ಯಂತದ ಉದ್ಯೋಗಿಗಳಿಗೆ ಸೂಚಿಸಿದೆ. ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಬಳಸುವಂತೆ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿಗಳಿಗೆ ತಾಕೀತು ಮಾಡಿದೆ. ನಾಲ್ಕು ವರ್ಷಗಳ ಹಿಂದೆ ಕೋವಿಡ್ ಹರಡಿದ ಬಳಿಕ ಹೆಚ್ಚಿನವರು ಬಯೊಮೆಟ್ರಿಕ್ ಹಾಜರಿ ದಾಖಲಿಸುವುದನ್ನು ಬಿಟ್ಟುಬಿಟ್ಟಿದ್ದರು.
ಬೆಳಿಗ್ಗೆ 9:15ರೊಳಗೆ ಕಚೇರಿಯಲ್ಲಿ ಇರದಿದ್ದರೆ ಅರ್ಧ ದಿನದ ಸಾಂದರ್ಭಿಕ ರಜೆ (ಸಿಎಲ್)ಯನ್ನು ಕಡಿತಗೊಳಿಸಲಾಗುವುದು ಎಂದು ಎಲ್ಲ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಯಾವುದೇ ಕಾರಣದಿಂದ ನಿರ್ದಿಷ್ಟ ದಿನದಂದು ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ದರೆ ಮುಂಚಿತವಾಗಿ ತಿಳಿಸಬೇಕು ಮತ್ತು ಸಿಎಲ್ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದ್ದು,ಅಧಿಕಾರಿಗಳು ತಮ್ಮ ವಿಭಾಗಗಳಲ್ಲಿ ಸಿಬ್ಬಂದಿಗಳ ಹಾಜರಿ ಮತ್ತು ಸಮಯಕ್ಕೆ ಸರಿಯಾಗಿ ಬರುತ್ತಿದ್ದಾರೆಯೇ ಎಂಬ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದೆ.
ಕೇಂದ್ರ ಸರಕಾರದ ಕಚೇರಿಗಳು ಬೆಳಿಗ್ಗೆ 9ರಿಂದ ಸಂಜೆ 5:30 ಗಂಟೆಯವರೆಗೆ ತೆರೆದಿರುತ್ತವೆ, ಆದರೆ ಸಾರ್ವಜನಿಕರನ್ನು ಭೇಟಿಯಾಗುವವರು ಸೇರಿದಂತೆ ಕಿರಿಯ ಮಟ್ಟದ ನೌಕರರು ತಡವಾಗಿ ಕಚೇರಿಗೆ ಬಂದು ಬೇಗನೇ ನಿರ್ಗಮಿಸುವುದು ಮಾಮೂಲಾಗಿಬಿಟ್ಟಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮೋದಿ ಸರಕಾರವು ಕಚೇರಿ ಸಮಯಗಳನ್ನು ಕಟ್ಟುನಿಟ್ಟಾಗಿಸಲು ಬಯಸಿತ್ತು. ಆದರೆ ಇದನ್ನು ನೌಕರರು ವಿರೋಧಿಸಿದ್ದರು, ತಾವು ದೂರದಿಂದ ಪ್ರಯಾಣಿಸಿ ಬರುತ್ತಿದ್ದೇವೆ ಎಂದು ಅವರು ವಾದಿಸಿದ್ದರು.
ತಡವಾಗಿ ಕಚೇರಿಗೆ ಬರುವುದನ್ನು ಮತ್ತು ಬೇಗನೇ ನಿರ್ಗಮಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು ಮತು ಅದನ್ನು ನಿರುತ್ತೇಜಿಸಬೇಕು. ಅಂತಹವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇಲಾಖೆಗಳಲ್ಲಿ ಸಾರ್ವಜನಿಕರೊಂದಿಗೆ ವ್ಯವಹರಿಸುವ ಐಟಿ-ಶಕ್ತ ಮುಖರಹಿತ ಕಾರ್ಯವಿಧಾನವನ್ನು ಅಳವಡಿಸಲಾಗಿದೆ. ಹೀಗಾಗಿ ಹಲವಾರು ಸಿಬ್ಬಂದಿಗಳು ಕಚೇರಿಗೆ ಬರದಿರುವುದು ಅಥವಾ ಸ್ವಲ್ಪ ಕಾಲ ಮಾತ್ರ ಬಂದು ಹೋಗುವುದು ವಾಡಿಕೆಯಾಗಿದೆ. ಕೇಂದ್ರದ ಈ ಕ್ರಮವು ಸಿಬ್ಬಂದಿಗಳಲ್ಲಿ ಹೆಚ್ಚಿನ ಶಿಸ್ತನ್ನು ತರುವ ನಿರೀಕ್ಷೆಯಿದೆ,ಆದರೆ ಮಾಮೂಲಾಗಿ 10 ಗಂಟೆಗೆ ಅಥವಾ ಅದಕ್ಕಿಂತ ತಡವಾಗಿ ಕಚೇರಿ ಸೇರುವ ಉದ್ಯೋಗಿಗಳಿಗೆ ಇದು ಕಿರಿಕಿರಿಯನ್ನಂಟು ಮಾಡುವುದು ಖಚಿತ.