ನೈಜ ಜಿಡಿಪಿಯು ಶೇ. 7ರಷ್ಟಾಗುವ ನಿರೀಕ್ಷೆ : ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಶಕ್ತಿಕಾಂತ ದಾಸ್ | Photo: NDTV
ದಾವೋಸ್ (ಸ್ವಿಟ್ಸರ್ಲ್ಯಾಂಡ್): ಮುಂದಿನ ವರ್ಷ ಭಾರತದ ನೈಜ ಜಿಡಿಪಿ ಪ್ರಗತಿಯು ಶೇ. 7ರಷ್ಟು ತಲುಪುವ ನಿರೀಕ್ಷೆ ಇದೆ ಎಂದು ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದ ನೇಪಥ್ಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಸಾಂಕ್ರಾಮಿಕ ಹಾಗೂ ಉಕ್ರೇನ್ ಮತ್ತು ಮಧ್ಯ ಪ್ರಾಚ್ಯದಲ್ಲಿನ ಭೌಗೋಳಿಕ ರಾಜಕೀಯ ಪ್ರಕ್ಷುಬ್ದತೆಯಿಂದಾಗಿ ಆರ್ಥಿಕತೆಯು ಏರುಪೇರಾಗಿ ದೀರ್ಘಕಾಲ ಸಂಕಷ್ಟ ಅನುಭವಿಸಿದರೂ, ಬೃಹತ್ ಆರ್ಥಿಕತೆ ಸ್ಥಿರವಾಗಿದ್ದುದರಿಂದ ಈ ಪ್ರಗತಿ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
ಉಕ್ರೇನ್ ಬಿಕ್ಕಟ್ಟಿನ ಆರಂಭ ತಿಂಗಳುಗಳಲ್ಲಿ ಶೇ. 7.8ಕ್ಕೆ ತಲುಪಿ, ಕೇಂದ್ರೀಯ ಬ್ಯಾಂಕ್ ನಿಗದಿಗೊಳಿಸಿದ್ದ ಮಿತಿಯನ್ನು ಅಪಾಯಕಾರಿ ಮಟ್ಟದಲ್ಲಿ ಮೀರಿರುವ ಹಣದುಬ್ಬರದ ಮೇಲೆ ನಿಕಟವಾಗಿ ನಿಗಾ ವಹಿಸುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುಂದುವರಿಸಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಹಣದುಬ್ಬರ ಪ್ರಮಾಣವು ಶೇ. 4ಕ್ಕೆ ಇಳಿಕೆಯಾಗುವವರೆಗೂ ಹಣದುಬ್ಬರವು ಸಾಧಾರಣ ಪ್ರಮಾಣದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ ಎಂದೂ ಅವರು ಅಭಿಪ್ರಾಯ ಪಟ್ಟದ್ದಾರೆ.
ಭಾರತವು ಆರೋಗ್ಯ ಬಿಕ್ಕಟ್ಟು ಹಾಗೂ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯಂಥ ಚಂಚಲತೆ ಮತ್ತು ಅಸ್ಥಿರತೆಗಳಿಂದ ಚೇತರಿಸಿಕೊಂಡಿದ್ದು, ಉತ್ತಮವಾಗಿ ಮೇಲೆದ್ದು ನಿಂತಿದೆ. ನಮ್ಮ ಬೃಹತ್ ಆರ್ಥಿಕತೆಯ ಸ್ಥಿರತೆಯು ಇನ್ನಿತರ ಬಹುತೇಕ ದೇಶಗಳಿಗಿಂತ ಉತ್ತಮವಾಗಿದ್ದು, ನಮ್ಮ ಹಣಕಾಸು ವಲಯವೂ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು NDTV ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಶಕ್ತಿಕಾಂತ ದಾಸ್ ಹೇಳಿದ್ದಾರೆ.