ಮಣಿಪುರದಲ್ಲಿ NRC ಜಾರಿಗೊಳಿಸಲು ಶಿಫಾರಸು ಮಾಡುತ್ತೇನೆ : ಮುಖ್ಯಮಂತ್ರಿ ಬಿರೇನ್ ಸಿಂಗ್
ಎನ್.ಬಿರೇನ್ ಸಿಂಗ್ | Photo: X
ಇಂಫಾಲ : ರಾಜ್ಯ ಸರಕಾರವೊಂದೇ ಪೌರತ್ವ ನೋಂದಣಿ ಮಾಡಲು ಸಾಧ್ಯನವಿಲ್ಲದೇ ಇರುವುದರಿಂದ ರಾಷ್ಟ್ರೀಯ ಪೌರತ್ವ ನೋಂದಣಿ(NRC) ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಾನು ಶಿಫಾರಸು ರವಾನಿಸುತ್ತೇನೆ ಎಂದು ಬುಧವಾರ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ.
ನಿರ್ದಿಷ್ಟವಾಗಿ ರಾಜ್ಯದ ಹಿತಾಸಕ್ತಿಯಯನ್ನು ಪರಿಗಣಿಸಿ ಹಾಗೂ ಸಾರ್ವತ್ರಿಕವಾಗಿ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡುವ ನಿರ್ಣಯವು ಕೆಲ ದಿನಗಳ ಹಿಂದಷ್ಟೇ ಮಣಿಪುರ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಬೆನ್ನಿಗೇ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
“ರಾಜ್ಯವು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ನಾವು ಈ ಕುರಿತು ಸದನದಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಮಣಿಪುರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಿ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡುವ ಶಿಫಾರಸನ್ನು ನಾವು ಕಳಿಸಲಿದ್ದೇವೆ” ಎಂದು ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರಿಗೆ ಸಿಂಗ್ ತಿಳಿಸಿದ್ದಾರೆ.
ಈ ರಾಷ್ಟ್ರೀಯ ಪೌರತ್ವ ನೋಂದಣಿಯು 1961ನೇ ಇಸವಿಯನ್ನು ಆಧಾರವಾಗಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಡಿಸೆಂಬರ್ 2019ರಲ್ಲಿ ಪರಿಚಯವಾಗಿ, ಜನವರಿ 2020ರಲ್ಲಿ ಜಾರಿಗೆ ಬಂದಿದ್ದ ಆಂತರಿಕ ಗಡಿ ಪರವಾನಗಿ (ಐಎಲ್ಪಿ)ಯು ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು 1961ನೇ ಇಸವಿಯನ್ನು ಆಧಾರವಾಗಿಸಿಕೊಂಡಿತ್ತು. ಈ ಆಧಾರವನ್ನೇ 2022ರಲ್ಲಿ ರಾಜ್ಯ ಸಚಿವ ಸಂಪುಟವು ಅಳವಡಿಸಿಕೊಂಡಿತ್ತು.