ಕೇಂದ್ರೀಕೃತ ಸಿಯುಇಟಿ ಪರೀಕ್ಷಾ ವ್ಯವಸ್ಥೆ ಮರು ಪರಿಶೀಲಿಸಿ: ಆರೆಸ್ಸೆಸ್ ಆಗ್ರಹ
"ಕೀ ಉತ್ತರಗಳಲ್ಲಿ ವ್ಯತ್ಯಾಸಗಳು ಕಂಡು ಬಂದಿರುವುದು ಸ್ಪರ್ಧಾತ್ಮಕ ಪರೀಕ್ಷೆಗಳ ರಾಚನಿಕ ದೋಷಗಳನ್ನು ಬಿಂಬಿಸುತ್ತದೆ"
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸಿಯುಇಟಿ-ಯುಜಿ ಪರೀಕ್ಷೆಯ ಕೀ ಉತ್ತರಗಳಲ್ಲಿ ವ್ಯತ್ಯಾಸಗಳು ಕಂಡು ಬಂದಿರುವುದು ತೀರಾ ಗಂಭೀರ ಹಾಗೂ ಇದು ಸ್ಪರ್ಧಾತ್ಮಕ ಪರೀಕ್ಷೆಗಳ ರಾಚನಿಕ ದೋಷಗಳನ್ನು ಬಿಂಬಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಟೀಕಿಸಿದೆ.
ಆರೆಸ್ಸೆಸ್ನ ಶಿಕ್ಷಣ ವಿಭಾಗವಾದ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸದ ಸ್ಪರ್ಧಾತ್ಮಕ ಪರೀಕ್ಷೆಗಳ ರಾಷ್ಟ್ರೀಯ ಸಂಚಾಲಕ ದೇವೇಂದ್ರ ಸಿಂಗ್ ಈ ಬಗ್ಗೆ ಹೇಳಿಕೆ ನೀಡಿ, ಸುಧಾರಣೆಗಳನ್ನು ತರುವಂತೆ ಆಗ್ರಹಿಸಿದ್ದಾರೆ ಮತ್ತು ಪರ್ಯಾಯಗಳನ್ನು ಕೂಡಾ ಪ್ರಸ್ತಾವಿಸಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾನಿಲಯಗಳನ್ನು ಹೊರತುಪಡಿಸಿ ಎಲ್ಲ ರಾಜ್ಯ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಸಿಯುಇಟಿ-ಯುಜಿ ಮತ್ತು ಪಿಜಿ ಪರೀಕ್ಷೆಗಳಿಗೆ ಪರಿಗಣಿಸುವುದು ಅಗತ್ಯ. ಪ್ರತಿ ರಾಜ್ಯವೂ ತನ್ನದೇ ಆದ ಸನ್ನಿವೇಶಗಳನ್ನು ಹೊಂದಿರುತ್ತವೆ ಹಾಗೂ ಕೋರ್ಸ್ಗಳ ಲಭ್ಯತೆಯನ್ನು ಹೊಂದಿರುತ್ತವೆ. ರಾಜ್ಯ ಹಾಗೂ ಖಾಸಗಿ ವಿವಿಗಳ ನಡುವೆ ಸಂಪನ್ಮೂಲಗಳೂ ಭಿನ್ನವಾಗಿರುತ್ತವೆ. ಈ ವೈವಿಧ್ಯತೆ, ದೊಡ್ಡ ಪ್ರಮಾಣದ ಜನಸಂಖ್ಯೆ ಮತ್ತು ಅಂತರ ವಿಶ್ವವಿದ್ಯಾನಿಲಯಗಳ ನಡುವಿನ ಭಿನ್ನತೆಯಿಂದಾಗಿ ಇಡೀ ದೇಶದ ವಿಶ್ವವಿದ್ಯಾನಿಲಯಗಳಿಗೆ ಒಂದೇ ಪರೀಕ್ಷೆ ವಿವೇಚನಾಶೀಲ ಆಯ್ಕೆ ಎನಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಕಷ್ಟು ಸಂಪನ್ಮೂಲಗಳು ಇದ್ದರೂ ಕೇವಲ 100-50 ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಏಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪರೀಕ್ಷೆ ನಡೆಸುವ ಸಂಸ್ಥೆಗಳು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಶ್ನೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಹೇಗೆ ಜ್ಞಾನವಂತ ಮತ್ತು ಸಮರ್ಪಣಾ ಮನೋಭಾವದ ಪ್ರೊಫೆಸರ್ಗಳನ್ನು ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆಯೂ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.