ತೆರೆದ ನ್ಯಾಯಾಲಯದಲ್ಲಿ ಸಲಿಂಗ ವಿವಾಹ ತೀರ್ಪಿನ ಮರುಪರಿಶೀಲನೆ ; ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
ಸುಪ್ರೀಂ ಕೋರ್ಟ್| Photo: PTI
ಹೊಸದಿಲ್ಲಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ನಿರಾಕರಿಸಿ ತಾನು ಅಕ್ಟೋಬರ್ ನಲ್ಲಿ ನೀಡಿರುವ ಬಹುಮತ ಆಧಾರಿತ ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಮರುಪರಿಶೀಲನೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿದೆ.
ಸಾಮಾನ್ಯವಾಗಿ ಮರುಪರಿಶೀಲನಾ ಅರ್ಜಿಗಳನ್ನು ಸಂಬಂಧಪಟ್ಟ ನ್ಯಾಯಪೀಠದ ನ್ಯಾಯಾಧೀಶರ ಚೇಂಬರ್ಗಳಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಆದರೆ, ನ್ಯಾಯಾಧೀಶರ ಚೇಂಬರ್ಗಳಿಗೆ ಬದಲಾಗಿ, ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಮರುಪರಿಶೀಲಿಸಬೇಕು ಎಂದು ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ, ಮೇನಕಾ ಗುರುಸ್ವಾಮಿ, ಅರುಂಧತಿ ಕಟ್ಜು ಮತ್ತು ಕರುಣಾ ನಂದಿ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವನ್ನು ಒತ್ತಾಯಿಸಿದರು.
ಸಲಿಂಗ ವಿವಾಹದ ಬಗ್ಗೆ ಬಹುಮತದ ತೀರ್ಪು ನೀಡಿರುವ ನ್ಯಾಯಪೀಠದ ಮುಖ್ಯಸ್ಥರಾಗಿದ್ದ ನ್ಯಾ. ಎಸ್. ರವೀಂದ್ರ ಭಟ್ ಈಗಾಗಲೇ ನಿವೃತ್ತರಾಗಿದ್ದಾರೆ. ಅಲ್ಪಮತದ ಅಭಿಪ್ರಾಯ ನೀಡಿದವರ ಪೈಕಿ ಒಬ್ಬರಾಗಿರುವ ನ್ಯಾ. ಸಂಜಯ್ ಕಿಶನ್ ಕೌಲ್ ಡಿಸೆಂಬರ್ 25ರಂದು ನಿವೃತ್ತರಾಗಲಿದ್ದಾರೆ.
ನೈಜ ಕುಟುಂಬವೊಂದರ ಆನಂದವನ್ನು ಅನುಭವಿಸಲು ಬಯಸಿದ್ದ ಸಲಿಂಗ ದಂಪತಿಗಳು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ, ಮರೆಯಲ್ಲಿ ನಿಂತು ಅಪ್ರಾಮಾಣಿಕ ಬದುಕನ್ನು ಸಾಗಿಸಬೇಕಾಗಿದೆ ಎಂದು ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.