2024ರಲ್ಲಿ ವಿಮಾನ ನಿಲ್ದಾಣಗಳ ರಚನೆಗಳ ದಾಖಲೆ ಸಂಖ್ಯೆಯ ಕುಸಿತ; ಆರು ವರ್ಷಗಳಲ್ಲೇ ಗರಿಷ್ಠ
PC : PTI
ಹೊಸದಿಲ್ಲಿ: 2019ರಿಂದ 2024ರ ನಡುವೆ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ರಚನಾತ್ಮಕ ಕುಸಿತಗಳ 11 ಮತ್ತು ಮಳೆನೀರು ಸೋರಿಕೆಯ 10 ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಇಂತಹ ಗರಿಷ್ಠ ಘಟನೆಗಳು ಸಂಭವಿಸಿವೆ. ಸರಕಾರಿ ಅಧಿಕಾರಿಗಳು ವಿಮಾನ ನಿಲ್ದಾಣಗಳಲ್ಲಿಯ ರಚನಾತ್ಮಕ ಕುಸಿತಗಳ ದಾಖಲೆಗಳನ್ನು ನಿರ್ವಹಿಸುವುದಿಲ್ಲ. ಈ ಬಗ್ಗೆ ಇಂಗ್ಲಿಷ್ ದೈನಿಕ ‘Business Line’ ವಿಶ್ಲೇಷಣಾ ವರದಿಯೊಂದನ್ನು ಪ್ರಕಟಿಸಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ), ದಿಲ್ಲಿ ವಿಮಾನ ನಿಲ್ದಾಣ ಮತ್ತು ಜಿಎಂಆರ್ ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ವಾರ್ಷಿಕ ವರದಿಗಳ ವಿಶ್ಲೇಷಣೆಯು ವಿತ್ತವರ್ಷ 2023ರಲ್ಲಿ ವಿಮಾನ ನಿಲ್ದಾಣ ಕಟ್ಟಡಗಳ ದುರಸ್ತಿ ಮತ್ತು ನಿರ್ವಹಣೆ ವೆಚ್ಚಗಳಿಗಾಗಿ ಆದಾಯದ ಶೇಕಡಾವಾರು ಪ್ರಮಾಣವನ್ನು ತೋರಿಸಿದೆ. ವಿತ್ತವರ್ಷ 2024ರ ವಿವರಗಳು ಲಭ್ಯವಿಲ್ಲ.
ಎಎಐ ಸಿವಿಲ್ ಕಾಮಗಾರಿಗಳ ನಿರ್ವಹಣೆಗಾಗಿ ವಿತ್ತವರ್ಷ 2021ರಲ್ಲಿ ಆದಾಯದ ಶೇ.11.9ರಷ್ಟು ಮೊತ್ತವನ್ನು ವ್ಯಯಿಸಿದ್ದು, ವಿತ್ತವರ್ಷ 2023ರಲ್ಲಿ ಇದು ಶೇ.8.5ಕ್ಕೆ ಇಳಿದಿದೆ. ಇದೇ ರೀತಿ ಜಿಎಂಆರ್ ನೇತೃತ್ವದ ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ವೆಚ್ಚ ವಿತ್ತವರ್ಷ 2022ರ ಶೇ.4.9ರಿಂದ ವಿತ್ತವರ್ಷ 2023ರಲ್ಲಿ ಶೇ.4.4ಕ್ಕೆ ತಗ್ಗಿದೆ. ಪ್ರಯಾಣಿಕರಿಗೆ ವಿಧಿಸಲಾಗುತ್ತಿರುವ ಬಳಕೆದಾರ ಅಭಿವೃದ್ಧಿ ಶುಲ್ಕ (ಯುಡಿಎಫ್)ದಲ್ಲಿ ಏರಿಕೆಯಾಗಿದ್ದರೂ ನಿರ್ವಹಣಾ ವೆಚ್ಚ ಇಳಿಯುತ್ತಿದೆ ಎನ್ನುವುದು ಗಮನಾರ್ಹವಾಗಿದೆ. ವಿತ್ತವರ್ಷ 2023ರಲ್ಲಿ ಎಎಐಗೆ ವಿಮಾನ ನಿಲ್ದಾಣಗಳಿಂದ ಆದಾಯದಲ್ಲಿ ಶೇ.74ರಷ್ಟು ಏರಿಕೆಯಾಗಿದ್ದು, ಇದು ಯುಡಿಎಫ್ ಅನ್ನು ಒಳಗೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯು ವ್ಯಾಪಕ ಹಾನಿಗೆ ಕಾರಣವಾಗುತ್ತಿದ್ದು,ಇದರೊಂದಿಗೆ ಭಾರತೀಯ ವಿಮಾನ ನಿಲ್ದಾಣಗಳ ಸುರಕ್ಷತೆ ಮತ್ತು ರಚನಾತ್ಮಕ ಲೆಕ್ಕ ಪರಿಶೋಧನೆಯ ಅಗತ್ಯ ಕುರಿತು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಆಸ್ತಿಗಳ ನಿರ್ವಹಣೆಯೂ ಗಮನವನ್ನು ಸೆಳೆದಿದೆ.
ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇತ್ತೀಚಿಗೆ ಮೇಲ್ಛಾವಣಿ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇದು ಸೇರಿದಂತೆ ಕಳೆದ ಆರು ತಿಂಗಳುಗಳಲ್ಲಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಂತಹ ನಾಲ್ಕು ಘಟನೆಗಳು ನಡೆದಿವೆ. 2024 ಮಾರ್ಚ್ನಲ್ಲಿ ಭಾರೀ ಮಳೆಯಿಂದಾಗಿ ಗುವಾಹಟಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿಯುವುದರೊಂದಿಗೆ ಈ ಆತಂಕಕಾರಿ ಪ್ರವೃತ್ತಿ ಆರಂಭಗೊಂಡಿದ್ದು,ನಂತರ ಜೂನ್ ತಿಂಗಳೊಂದರಲ್ಲೇ ಬೆನ್ನುಬೆನ್ನಿಗೆ ಜಬಲ್ಪುರ, ದಿಲ್ಲಿ ಮತ್ತು ರಾಜಕೋಟ್ಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಮಾಧ್ಯಮಗಳ ವರದಿಗಳಂತೆ ಚೆನ್ನೈ ವಿಮಾನ ನಿಲ್ದಾಣವೊಂದರಲ್ಲೇ ಕಳೆದೊಂದು ದಶಕದಲ್ಲಿ 65 ರಚನಾತ್ಮಕ ಕುಸಿತಗಳು ಸಂಭವಿಸಿವೆ.
ಇಂತಹ ಘಟನೆಗಳೇಕೆ ಇಷ್ಟೊಂದು ಸಾಮಾನ್ಯವಾಗಿಬಿಟ್ಟಿವೆ? ಇನ್ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ಸ್ ಇಂಡಿಯಾದ ಮಂಡಳಿ ಸದಸ್ಯ ಆಕಾಶ ಝಾ ಹೇಳುವಂತೆ,ನಿರ್ದಿಷ್ಟ ಪ್ರದೇಶಗಳಲ್ಲಿ ಸರಾಸರಿ ಮಳೆಯ ತಪ್ಪು ಅಂದಾಜುಗಳು, ನಿಗದಿತ ಪರಿಪಾಠಗಳನ್ನು ಪಾಲಿಸುವಲ್ಲಿ ವೈಫಲ್ಯ, ನಿರ್ಮಾಣ ಸಾಮಗ್ರಿಗಳ ಗುಣಮಟ್ಟದ ಸಮಸ್ಯೆಗಳು, ಅಧಿಕಾರಶಾಹಿ ಲೋಪಗಳು ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಸೇರಿದಂತೆ ವಿಮಾನ ನಿಲ್ದಾಣಗಳ ರಚನಾತ್ಮಕ ಯೋಜನೆಗಳಲ್ಲಿ ಹಲವು ದೋಷಗಳಿವೆ.
ಭಾರತದಲ್ಲಿಯ ಹೆಚ್ಚಿನ ವಿಮಾನ ನಿಲ್ದಾಣಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತವೆ ಮತ್ತು ಈ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ಘಟಕಗಳ ಹೊಣೆಗಾರಿಕೆಯ ಪಾಲು ಅಸ್ಪಷ್ಟವಾಗಿದೆ.
ಭಾರತದ ಮೂಲಸೌಕರ್ಯ ಕ್ಷೇತ್ರದಾದ್ಯಂತ ವ್ಯವಸ್ಥಿತ ಸಮಸ್ಯೆಗಳಿವೆ. ಆದರೂ ಇಂತಹ ಲೋಪಗಳನ್ನು ತಡೆಯಲು ವಿಮಾನ ನಿಲ್ದಾಣದ ಅಧಿಕಾರಿಗಳು ವಾರ್ಷಿಕ ರಚನಾತ್ಮಕ ಲೆಕ್ಕ ಪರಿಶೋಧನೆಗಳನ್ನು ಕಡ್ಡಾಯಗೊಳಿಸುವುದು ಮತ್ತು ಮೂಲಸೌಕರ್ಯಗಳು ಎಂತಹುದೇ ಮಳೆಯನ್ನಾದರೂ ತಡೆದುಕೊಳ್ಳಬಲ್ಲುದು ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದೂ ಝಾ ಹೇಳಿದರು.