ಮಲೇಶ್ಯದಲ್ಲಿ ಭಾರತೀಯರ ನೇಮಕಾತಿ | ಉಭಯದೇಶಗಳ ನಡುವೆ ಮಹತ್ವದ ಒಪ್ಪಂದ
► ಮಲೇಶ್ಯ ಪ್ರಧಾನಿ ಅನ್ವರ್ಇಬ್ರಾಹೀಂ ಹೊಸದಿಲ್ಲಿ ಭೇಟಿ; ಮೋದಿ ಜೊತೆ ಮಾತುಕತೆ ► ದ್ವಿಪಕ್ಷೀಯ ಸಮಗ್ರ ಪಾಲುದಾರಿಕೆಯನ್ನು ವಿಸ್ತರಿಸುವ ಎಂಟು ಒಪ್ಪಂದಗಳಿಗೆ ಅಂಕಿತ
ಅನ್ವರ್ಇಬ್ರಾಹೀಂ , ನರೇಂದ್ರ ಮೋದಿ | PC : PTI
ಹೊಸದಿಲ್ಲಿ:ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಸಮಗ್ರ ಆಯಕಟ್ಟಿನ ಪಾಲುದಾರಿಕೆಯೆಡೆಗೆ ವಿಸ್ತರಿಸುವ ಮಹತ್ವದ ಒಪ್ಪಂದಕ್ಕೆ ಭಾರತ ಹಾಗೂ ಮಲೇಶ್ಯ ಮಂಗಳವಾರ ಸಹಿಹಾಕಿವೆ. ಭಾರತ ಪ್ರವಾಸದಲ್ಲಿರುವ ಮಲೇಶ್ಯ ಪ್ರಧಾನಿ ಅನ್ವರ್ ಇಬ್ರಾಹೀಂ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ವ್ಯಾಪಾರ, ಹೂಡಿಕೆ ಹಾಗೂ ರಕ್ಷಣೆ ಸೇರಿದಂತೆ ವಿವಿಧ ವಲಯಗಳಲ್ಲಿ ಎರಡೂ ದೇಶಗಳ ನಡುವೆ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಸ್ತೃತ ಮಾತುಕತೆಗಳನ್ನು ನಡೆಸಿದರು.
ಮಾತುಕತೆಯ ಬಳಿಕ ಭಾರತ ಹಾಗೂ ಮಲೇಶ್ಯ ನಡುವೆ ಕನಿಷ್ಠ ಎಂಟು ಒಪ್ಪಂದಗಳಿಗೆ ಸಹಿಹಾಕಲಾಯಿತು.
ಮಲೇಶ್ಯದಲ್ಲಿ ವಿವಿಧ ಉದ್ಯೋಗಗಳಲ್ಲಿ ಭಾರತೀಯರ ನೇಮಕವನ್ನು ಉತ್ತೇಜಿಸುವ ಹಾಗೂ ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಒಪ್ಪಂದಕ್ಕೆ ಸಹಿಬಿದ್ದಿದೆ.
ಭಾರತದಿಂದ ಮಲೇಶ್ಯಕ್ಕೆ ಅಕ್ರಮ ವಲಸೆ ಹಾಗೂ ಮಾನವಕಳ್ಳಸಾಗಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಗಳಲ್ಲಿ ಭಾರತೀಯರ ನೇಮಕಾತಿ ಕುರಿತು ಈ ಒಪ್ಪಂದವು ಹೆಚ್ಚಿನ ಮಹತ್ವ ಪಡೆದಿದೆ.
ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಇಬ್ರಾಹೀಂ ಅವರು ಸೋಮವಾರ ರಾತ್ರಿ ಹೊಸದಿಲ್ಲಿಗೆ ಆಗಮಿಸಿದ್ದರು.
ಉಭಯದೇಶಗಳ ನಡುವೆ ವಿವಿಧ ಒಪ್ಪಂದಗಳಿಗೆ ಸಹಿಹಾಕಿದ ಬಳಿಕ ಪ್ರಧಾನಿ ಮೋದಿಯವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ‘‘ ನಮ್ಮ ಪಾಲುದಾರಿಕೆಯನ್ನು ಸಮಗ್ರ ವ್ಯೆಹಾತ್ಮಕ ಪಾಲುದಾರಿಕೆಯೆಡೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ಹೇಳಿದ್ದಾರೆ.
ಮಲೇಶ್ಯದಲ್ಲಿ ಭಾರತೀಯರಿಗೆ ಉದ್ಯೋಗ ಕುರಿತ ಒಪ್ಪಂದವು ಆ ದೇದಲ್ಲಿ ಭಾರತೀಯರ ನೇಮಕಾತಿಯನ್ನು ಉತ್ತೇಜಿಸಲಿದೆ ಹಾಗೂ ಅವರ ಹಿತಾಸಕ್ತಿಗಳನ್ನು ರಕ್ಷಿಸಲಿದೆ ಎಂದರು.
ಭಾರತ-ಮಲೇಶ್ಯ ಆರ್ಥಿಕ ಒಪ್ಪಂದದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಉಭಯ ದೇಶಗಳ ವಾಣಿಜ್ಯವ್ಯವಹಾರಗಳನ್ನು ಭಾರತೀಯ ರೂಪಾಯಿ ಹಾಗೂ ಮಲೇಶ್ಯ ಕರೆನ್ಸಿ ರಿಂಗ್ಗಿಟ್ಗಳಲ್ಲೇ ನಡೆಸಲಾಗುತ್ತಿದೆ ಎಂದರು.
ಎರಡೂ ದೇಶಗಳ ನಡುವೆ ಆರ್ಥಿಕ ಸಹಕಾರ, ದ್ವಿಪಕ್ಷೀಯ ವ್ಯಾಪಾರ ಹಾಗೂ ಹೂಡಿಕೆ ವಿಸ್ತರಣೆಗೆ ವಿಪುಲ ಅವಕಾಶಗಳಿವೆ’’ ಎಂದು ಮೋದಿ ಹೇಳಿದರು.
ಭಾರತದ ಡಿಜಿಟಲ್ ಹಣಪಾವತಿ ವ್ಯವಸ್ಥೆ ಯುಪಿಐಯನ್ನು ಮಲೇಶ್ಯದ ಪೇನೆಟ್ ಜೊತೆ ಸಂಪರ್ಕಿಸುವ ನಿಟ್ಟಿನಲ್ಲಿಯೂ ಕಾರ್ಯಗಳು ನಡೆಯುತ್ತಿವೆ ಎಂದರು. ಭಯೋತ್ಪಾದನೆ ಹಾಗೂ ತೀವ್ರವಾದದ ವಿರುದ್ಧ ಹೋರಾಟದಲ್ಲಿ ನಾವು ಒಮ್ಮತವನ್ನು ಹೊಂದಿದ್ದೇವೆ ಎಂದರು.
ಅಸಿಯಾನ್ (ಆಗ್ನೇಯ ಏಶ್ಯ ದೇಶಗಳ ಸಂಘ) ಹಾಗೂ ಭಾರತ ಪೆಸಿಫಿಕ್ ಪ್ರಾಂತದಲ್ಲಿ ಭಾರತವು ಮಲೇಶ್ಯದ ಮಹತ್ವದ ಪಾಲುದಾರ ಎಂದು ಮೋದಿ ಬಣ್ಣಿಸಿದ್ದಾರೆ.