ದೇಶಿ ಕಚ್ಚಾತೈಲ, ಡೀಸೆಲ್ ರಫ್ತಿನ ಮೇಲಿನ ವಿಂಡ್ಫಾಲ್ ತೆರಿಗೆಯಲ್ಲಿ ಕಡಿತ
Photo : PTI
ಹೊಸದಿಲ್ಲಿ: ದೇಶೀಯವಾಗಿ ಉತ್ಪಾದನೆಯಾಗುವ ಕಚ್ಚಾತೈಲದ ಮೇಲೆ ಮತ್ತು ಡೀಸೆಲ್ ರಫ್ತಿನ ಮೇಲೆ ವಿಧಿಸಲಾಗಿದ್ದ ವಿಂಡ್ಫಾಲ್ ತೆರಿಗೆ (ಅಪಾರ ಲಾಭದ ಮೇಲೆ ವಿಧಿಸಲಾಗುವ ಹೆಚ್ಚುವರಿ ತೆರಿಗೆ)ಯನ್ನು ಕೆಂದ್ರ ಸರಕಾರ ಗುರುವಾರ ಕಡಿತಗೊಳಿಸಿದೆ. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.
ಭಾರತದಲ್ಲಿ ವಿಂಡ್ಫಾಲ್ ತೆರಿಗೆಯನ್ನು ಕಳೆದ ವರ್ಷದ ಜುಲೈಯಲ್ಲಿ ಮೊದಲ ಬಾರಿಗೆ ವಿಧಿಸಲಾಗಿತ್ತು. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್ಗೆ 75 ಡಾಲರ್ಗಿಂತ ಹೆಚ್ಚಾದರೆ ದೇಶಿ ಕಚ್ಚಾ ತೈಲಕ್ಕೆ ವಿಂಡ್ಫಾಲ್ ತೆರಿಗೆಯನ್ನು ವಿಧಿಸಲಾಗುತ್ತದೆ. ತೆರಿಗೆ ದರವನ್ನು ಹಿಂದಿನ ಎರಡು ವಾರಗಳ ಸರಾಸರಿ ತೈಲ ಬೆಲೆಯ ಆಧಾರದಲ್ಲಿ 15 ದಿನಗಳಿಗೊಮ್ಮೆ ಮರುಪರಿಶೀಲಿಸಲಾಗುತ್ತದೆ.
ಭಾರತದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರ ಎನರ್ಜಿ ಪ್ರಮುಖ ಇಂಧನ ರಫ್ತು ಸಂಸ್ಥೆಗಳಾಗಿವೆ.
ಗುರುವಾರ ಹೊರಡಿಸಲಾದ ಸರಕಾರಿ ಅಧಿಸೂಚನೆಯ ಪ್ರಕಾರ, ದೇಶಿ ಕಚ್ಚಾತೈಲದ ಮೇಲಿನ ತೆರಿಗೆಯನ್ನು ಟನ್ ಗೆ 9,800 ರೂ.ಯಿಂದ 6,300 ರೂಪಾಯಿಗೆ ತಗ್ಗಿಸಲಾಗಿದೆ. ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನು 50 ಶೇ. ಕಡಿಮೆಗೊಳಿಸಲಾಗಿದ್ದು, ಲೀಟರಿಗೆ ಒಂದು ರೂಪಾಯಿ ನಿಗದಿಪಡಿಸಲಾಗಿದೆ. ವಿಮಾನ ಇಂಧನ ಮತ್ತು ಪೆಟ್ರೋಲ್ ರಫ್ತು ತೆರಿಗೆರಹಿತವಾಗಿಯೇ ಮುಂದುವರಿಯಲಿದೆ.