ಮನುಸ್ಮೃತಿಯನ್ನು ಉಲ್ಲೇಖಿಸಿ, ಪತ್ನಿಗೆ ಜೀವನಾಂಶ ನಿರಾಕರಿಸಿದ ಹೈಕೋರ್ಟ್!
Photo: freepik
ರಾಂಚಿ: ಭಾರತೀಯ ಸಂಸ್ಕೃ ತಿಯ ಪ್ರಕಾರ, ಪತಿಯ ಕುಟುಂಬದ ಹಿರಿಯರ ಸೇವೆ ಮಾಡುವುದು ಪತ್ನಿಯ ಕರ್ತವ್ಯ ಹಾಗೂ ಈ ಕಾರಣಕ್ಕಾಗಿ ಪ್ರತ್ಯೇಕವಾಗಿ ಜೀವನ ಸಾಗಿಸುವ ಬಗೆಗಿನ ಬೇಡಿಕೆ ಅತಾರ್ಕಿಕ ಎಂದು ಅಭಿಪ್ರಾಯಪಟ್ಟಿರುವ ಜಾರ್ಖಂಡ್ ಹೈಕೋರ್ಟ್, ಪರಿತ್ಯಕ್ತ ಪತಿಯಿಂದ ಜೀವನಾಂಶ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ಸಂಬಂಧ ಕುಟುಂಬ ನ್ಯಾಯಾಲಯ ಪತ್ನಿಯ ಪರವಾಗಿ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ.
ನ್ಯಾಯಮೂರ್ತಿ ಸುಭಾಷ್ ಚಂದ ಅವರ 25 ಪುಟಗಳ ಆದೇಶದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹಾಗೂ ಮನುಸ್ಮೃತಿ ಸೇರಿದಂತೆ ಪುರಾಣಗಳ ಉಲ್ಲೇಖ ಮಾಡಿ, ಆದರ್ಶ ವೈವಾಹಿಕ ಸಂಬಂಧ ಮತ್ತು ದಂಪತಿಯ ಹಕ್ಕು ಮತ್ತು ಕರ್ತವ್ಯಗಳ ರೂಪುರೇಷೆಯನ್ನು ನೀಡಲಾಗಿದೆ.
ವಿವಾಹಿತ ಪುರುಷ ತನ್ನ ಪೋಷಕರಿಗಿಂತ ಪ್ರತ್ಯೇಕವಾಗಿ ಜೀವಿಸುವ ಪಾಶ್ಚಿಮಾತ್ಯ ಸಂಸ್ಕೃ ತಿಗಿಂತ ಭಿನ್ನವಾಗಿ ಭಾರತೀಯ ಪರಿಸ್ಥಿತಿಯಲ್ಲಿ ಈ ಲೆಕ್ಕಾಚಾರ ಸಂಪೂರ್ಣ ಬದಲಾಗುತ್ತದೆ ಎಂದು ಆದೇಶ ಸ್ಪಷ್ಟಪಡಿಸಿದೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ಮಹಿಳೆ ವಿವಾಹದ ಬಳಿಕ ಪತಿಯ ಕುಟುಂಬದ ಜತೆಗೆ ಇರಬೇಕಾಗುತ್ತದೆ. ಆಕೆ ಕುಟುಂಬದ ಅವಿಭಾಜ್ಯ ಅಂಗವಾಗುತ್ತಾಳೆ. ಸಾಮಾನ್ಯವಾಗಿ ಯಾವುದೇ ಪ್ರಬಲ ಹಾಗೂ ನ್ಯಾಯಸಮ್ಮತ ಕಾರಣಗಳು ಇಲ್ಲದೇ ಇದ್ದಲ್ಲಿ, ಪತಿಯ ಕುಟುಂಬದಿಂದ ಪ್ರತ್ಯೇಕವಾಗಿ ತಾನು ಬೇರೆಯೇ ವಾಸಿಸಲು ಅವಕಾಶ ನೀಡುವಂತೆ ಕೋರಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಥೆರೇಸಾ ಚಾಕೋ ಅವರ ಇಂಟ್ರೊಡಕ್ಷನ್ ಟೂ ಫ್ಯಾಮಿಲಿ ಲೈಫ್ ಎಜ್ಯುಕೇಶನ್ ಕೃತಿಯ ಅಂಶಗಳನ್ನು ಉಲ್ಲೇಖಿಸಿರುವ ನ್ಯಾಯಾಧೀಶರ ಆದೇಶದಲ್ಲಿ, "ಪುರುಷರು ಮತ್ತು ಮಹಿಳೆಯರ ಸೂಕ್ತ ನಡವಳಿಕೆ ಬಗ್ಗೆ ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ನಿರೀಕ್ಷೆಗಳು ಇರುತ್ತವೆ". ಮಹಿಳೆಯರು ದಾಂಪತ್ಯದ ಸಾಮಾಜಿಕ ಜೀವನದ ಹೊಣೆ ವಹಿಸಿಕೊಳ್ಳಬೇಕು. ಪತಿಯ ಕೆಲಸದಲ್ಲಿ ಆಸಕ್ತಿ ವಹಿಸಬೇಕು. ಆತನ ಚಟುವಟಿಕೆಗಳ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಆಸಕ್ತಿ ಬೇಕು" ಎಂದು ಸ್ಪಷ್ಟಪಡಿಸಲಾಗಿದೆ.