ಎಫ್ ಸಿ ಆರ್ ಎ ಪರವಾನಿಗೆ ನಿರಾಕರಣೆ: ಯೋಜನೆಗಳು ಬಹುತೇಕ ಸ್ಥಗಿತ
ಹೈಕೋರ್ಟ್ ಗೆ ತಿಳಿಸಿದ ಆಕ್ಸ್ಫಾಮ್ ಇಂಡಿಯಾ
ಕೇಂದ್ರ ಗೃಹ ಸಚಿವಾಲಯ | Photo: PTI
ಹೊಸದಿಲ್ಲಿ: ನಮ್ಮ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್ ಸಿ ಆರ್ ಎ) ಪರವಾನಿಗೆಯನ್ನು ನವೀಕರಿಸಲು ಕೇಂದ್ರ ಗೃಹ ಸಚಿವಾಲಯವು ನಿರಾಕರಿಸಿರುವ ಹಿನ್ನೆಲೆಯಲ್ಲಿ, ನಮ್ಮ ಕೆಲಸವು ಬಹುತೇಕ ಸ್ಥಗಿತಗೊಂಡಿದೆ ಎಂದು ಸರಕಾರೇತರ ಸಂಘಟನೆ ಆಕ್ಸ್ಫಾಮ್ ಇಂಡಿಯಾ ದಿಲ್ಲಿ ಹೈಕೋರ್ಟ್ ಗೆ ತಿಳಿಸಿದೆ.
ಭಾರತದಲ್ಲಿ ಕಾರ್ಯಾಚರಿಸುವ, ಸಮಾಜಸೇವಾ ಉದ್ದೇಶದ ಯಾವುದೇ ಸಂಸ್ಥೆಯು ವಿದೇಶಿ ದೇಣಿಗೆಗಳನ್ನು ಪಡೆದುಕೊಳ್ಳಲು ಎಫ್ ಸಿ ಆರ್ ಎ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
2022 ಜನವರಿ 1ರಂದು, ಆಕ್ಸ್ಫಾಮ್ ಸೇರಿದಂತೆ 5,932 ಸಾಮಾಜಿಕ ಸೇವಾ ಸಂಘಟನೆಗಳ ಎಫ್ ಸಿ ಆರ್ ಎ ನೋಂದಣಿಯು ರದ್ದಾಗಿತ್ತು. ಅದಕ್ಕೆ ಕಾರಣವೆಂದರೆ, ಒಂದೋ ಅವುಗಳು ನವೀಕರಣಕ್ಕೆ ಅರ್ಜಿ ಹಾಕಿಲ್ಲ ಅಥವಾ ಅರ್ಜಿಗಳನ್ನು ಗೃಹ ಸಚಿವಾಲಯ ತಿರಸ್ಕರಿಸಿತ್ತು. ಆಕ್ಸ್ಫಾಮ್ ಇಂಡಿಯಾದ ಅರ್ಜಿಯನ್ನು ಗೃಹ ಸಚಿವಾಲಯ ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಆಕ್ಸ್ಫಾಮ್ ಹೈಕೋರ್ಟ್ ಗೆ ಹೋಯಿತು. 2022 ನವೆಂಬರ್ನಲ್ಲಿ, ಆಕ್ಸ್ಫಾಮ್ನ ಅರ್ಜಿಯ ಬಗ್ಗೆ ಆರು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚಿಸಿತು. 2022 ಡಿಸೆಂಬರ್ನಲ್ಲಿ ಗೃಹ ಸಚಿವಾಲಯವು, ಎಫ್ ಸಿ ಆರ್ ಎ ನೋಂದಣಿ ನವೀಕರಣ ಕೋರುವ ಆಕ್ಸ್ಫಾಮ್ನ ಅರ್ಜಿಯನ್ನು ತಿರಸ್ಕರಿಸಿತು. ಅದರ ವಿರುದ್ಧ ಆಕ್ಸ್ಫಾಮ್ ಈಗಲೂ ನ್ಯಾಯಾಲಯದಲ್ಲಿ ಹೋರಾಡುತ್ತಿದೆ.
ತನ್ನ ಏಳು ಅಭಿವೃದ್ಧಿ ಯೋಜನೆಗಳ ಪೈಕಿ ಮೂರು ಯೋಜನೆಗಳು 2023 ಡಿಸೆಂಬರ್ ವೇಳೆಗೆ ಸಂಪನ್ಮೂಲಗಳ ಕೊರತೆಯಿಂದಾಗಿ ನಿಂತು ಹೋಗಿವೆ ಎಂದು ಕಳೆದ ವಾರ ಸಲ್ಲಿಸಿದ ಅಫಿದಾವಿತ್ನಲ್ಲಿ ಅದು ಹೇಳಿದೆ. ಇತರ ಯೋಜನೆಗಳನ್ನೂ ಶೀಘ್ರವೇ ನಿಲ್ಲಿಸಲಾಗುವುದು ಎಂದು ಅದು ತಿಳಿಸಿದೆ.
2021 ಡಿಸೆಂಬರ್ನಲ್ಲಿ, ಆಕ್ಸ್ಫಾಮ್ 251 ಸಿಬ್ಬಂದಿಯನ್ನು ಹೊಂದಿತ್ತು. ಈಗ ಅದರ ಬಳಿ ಕೇವಲ 15 ಸಿಬ್ಬಂದಿಯಿದ್ದಾರೆ. ಮಾರ್ಚ್ ವೇಳೆಗೆ ತನ್ನ ಸಿಬ್ಬಂದಿ ಸಂಖ್ಯೆ ನಾಲ್ಕಕ್ಕೆ ಕುಸಿಯಲಿದೆ ಎಂದು ಅದು ನ್ಯಾಯಾಲಯಕ್ಕೆ ತಿಳಿಸಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ)ವು ಆಕ್ಸ್ಫಾಮ್ ಇಂಡಿಯಾ ವಿರುದ್ಧ ತನಿಖೆಯನ್ನೂ ಮಾಡುತ್ತಿದೆ. ಎಪ್ರಿಲ್ನಲ್ಲಿ, ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶಕ ಜೀತೇಂದ್ರ ಚಡ್ಡಾ ಸಲ್ಲಿಸಿದ ದೂರಿನ ಆಧಾರದಲ್ಲಿ ಸಿಬಿಐಯು ಅದರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದೆ.