ಬ್ಯಾಂಕ್ ಖಾತೆ ತೆರೆಯಲು ಅವಕಾಶ ನಿರಾಕರಣೆ: ಶಾರುಖ್ ಬಳಿ ಸಹಾಯ ಕೇಳಿದ ಆ್ಯಸಿಡ್ ದಾಳಿ ಸಂತ್ರಸ್ತೆ
Photo: ಶಾರುಖ್ ಖಾನ್ (PTI ) \ ಪ್ರಜ್ಞಾ ಪ್ರಸೂನ್ ಸಿಂಗ್ (IANS)
ಮುಂಬೈ: ಆನ್ಲೈನ್ ಮೂಲಕ ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶ ನಿರಾಕರಿಸಿರುವ ಕಾರಣ ಆ್ಯಸಿಡ್ ದಾಳಿ ಸಂತ್ರಸ್ತೆಯೊಬ್ಬರು ನಟ ಶಾರುಖ್ ಖಾನ್ ಬಳಿ ಸಹಾಯ ಕೋರಿದ್ದಾರೆ.
"ಆ್ಯಸಿಡ್ ದಾಳಿ ಸಂತ್ರಸ್ತೆಯಾಗಿರುವ ನನಗೆ ಗೌರವಯುತ ಜೀವನ ನಡೆಸುವುದನ್ನು ನಿಷೇಧಿಸಬಾರದು. KYC ಪ್ರಕ್ರಿಯೆಗಾಗಿ ನಾನು ಕಣ್ಣು ಮಿಟುಕಿಸಲು ಸಾಧ್ಯವಿಲ್ಲ ಎಂದು ನನಗೆ ಬ್ಯಾಂಕ್ ಖಾತೆಯನ್ನು ನಿರಾಕರಿಸಿರುವುದು ಅನ್ಯಾಯ. ಆ್ಯಸಿಡ್ ದಾಳಿ ಸಂತ್ರಸ್ತೆಯರನ್ನು ಈ ಜಗತ್ತು ಒಳಗೊಳ್ಳುವಂತೆ ಮಾಡಲು ನನಗೆ ಸಹಾಯ ಮಾಡಿ” ಎಂದು ಶಾರುಖ್ ಖಾನ್ ಮತ್ತು ಅವರ ಮೀರ್ ಫೌಂಡೇಶನ್ ಅನ್ನು ಟ್ಯಾಗ್ ಮಾಡಿ ಪ್ರಜ್ಞಾ ಪ್ರಸೂನ್ ಸಿಂಗ್ ಎಂಬ ಆಸಿಡ್ ದಾಳಿ ಸಂತ್ರಸ್ತೆ ಮನವಿ ಮಾಡಿದ್ದಾರೆ.
ಪ್ರಜ್ಞಾ ಪ್ರಸೂನ್ ಅವರಿಗೆ ಕಣ್ಣು ರೆಪ್ಪೆಗಳನ್ನು ಮಿಟುಕಿಸಲು ಸಾಧ್ಯವಾಗದ ಕಾರಣ ಬ್ಯಾಂಕ್ ಖಾತೆಯನ್ನು ತೆರೆಯಲು ಬೇಕಾದ KYC ಮಾಡಲು ಸಾಧ್ಯವಾಗಲಿಲ್ಲ. ಕೆವೈಸಿ ಮೂಲಕ ಸಂಪೂರ್ಣ ಬಯೋಮೆಟ್ರಿಕ್ ವಿವರಗಳನ್ನು ಸ್ಕ್ಯಾನ್ ಮಾಡುವುದು ಅಗತ್ಯವಾಗಿರುವುದರಿಂದ ಖಾತೆ ತೆರೆಯಲು ಅವಕಾಶ ನಿರಾಕರಿಸಲಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ.
"ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಾಗುವುದು ನನ್ನ ಹಕ್ಕು" ಎಂದು ಹೇಳಿರುವ ಪ್ರಜ್ಞಾ, ತಾನು ಹೊಸ ಸಿಮ್ ಕಾರ್ಡ್ ಖರೀದಿಸುವಾಗಲೂ ಇದೇ ಸಮಸ್ಯೆಯನ್ನು ಎದುರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಶಾರೂಖ್ ಖಾನ್ ಅವರ ಮೀರ್ ಫೌಂಡೇಶನ್ ಚಾರಿಟಿ ಸಂಸ್ಥೆಯಾಗಿದ್ದು, ಇದು ಆಸಿಡ್ ದಾಳಿಯ ಸಂತ್ರಸ್ತರ ಪುನರ್ವಸತಿಗಾಗಿ ಹಾಗೂ ಅವರ ಶಸ್ತ್ರಚಿಕಿತ್ಸೆಗಳಿಗೆ ಹಣವನ್ನು ನೀಡಿ ಸಹಾಯ ಮಾಡುತ್ತದೆ.