ಮಲ ಹೊರುವ ಕಾರ್ಮಿಕರಿಗೆ ಪುನರ್ವಸತಿ ಯೋಜನೆ
ಕರ್ನಾಟಕ ಸರ್ಕಾರದಿಂದ ಒಂದು ಬಾರಿಗೆ ರೂ. 40,000 ನಗದು ನೆರವಿಗೆ ಅನುಮೋದನೆ
ಸಾಂದರ್ಭಿಕ ಚಿತ್ರ \ Photo: PTI
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಸುಮಾರು 4,500 ಮಲಹೊರುವ ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕಿದ್ದು, ಸಾಮಾಜಿಕವಾಗಿ ಕೆಳಮಟ್ಟದಲ್ಲಿರುವ ಅವರಿಗೆ ಒಂದು ಬಾರಿ ನಗದು ನೆರವು, ನೇರ ಸಾಲಗಳು ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ ಎಂದು theprint.in ವರದಿ ಮಾಡಿದೆ.
“ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ” ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ. ಈ ಸಂಸ್ಥೆಯು ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಅಡಿ ಕಾರ್ಯನಿರ್ವಹಿಸುತ್ತದೆ. “ಸುಮಾರು 4,500 ಮಂದಿ ಮಲಹೊರುವ ಕಾರ್ಮಿಕರಿಗೆ ಒಂದು ಬಾರಿಯ ನಗದು ನೆರವನ್ನು ಒದಗಿಸಲಾಗುತ್ತಿದ್ದು, ಇದರ ಮೊತ್ತ ರೂ. 18 ಕೋಟಿ ಆಗಲಿದೆ. ಇದಲ್ಲದೆ, ನೇರ ಸಾಲಗಳು ಹಾಗೂ ಇನ್ನಿತರ ಯೋಜನೆಗಳಡಿ ಸೌಲಭ್ಯಗಳನ್ನು ಒದಗಿಸಲು ಸುಮಾರು ರೂ. 12 ಕೋಟಿ ವೆಚ್ಚವಾಗಲಿದೆ. ಒಟ್ಟಾರೆಯಾಗಿ ಈ ಸೌಲಭ್ಯಗಳ ವಿತರಣೆಗೆ ರೂ.30 ಕೋಟಿಯಾಗಲಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಬೀದಿಗಳಿಂದ ಮಲವನ್ನು ತೆಗೆಯುವವರು, ಒಳಚರಂಡಿಯನ್ನು ಶುಚಿಗೊಳಿಸುವವರು, ಗಟಾರ ಹಾಗೂ ಚರಂಡಿಗಳನ್ನು ಶುಚಿಗೊಳಿಸುವವರಿಗೆ ಶೌಚ ಗುಂಡಿ ಶುಚಿತ್ವ ಕಾರ್ಮಿಕರು ಎಂಬ ಪದವನ್ನು ಬಳಸಲಾಗುತ್ತದೆ. ಶೌಚ ಗುಂಡಿಗಳನ್ನು ಮನುಷ್ಯರನ್ನು ಬಳಸಿ ಶುಚಿತ್ವಗೊಳಿಸುವ ಪದ್ಧತಿಯನ್ನು 1993ರಲ್ಲೇ ದೇಶಾದ್ಯಂತ ನಿಷೇಧಿಸಲಾಗಿದೆ. ಹೀಗಿದ್ದೂ, ಗ್ರಾಮೀಣ ಹಾಗೂ ಪಟ್ಟಣ ಕೇಂದ್ರಗಳಲ್ಲೂ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಈ ಪದ್ಧತಿ ಇಂದಿಗೂ ಮುಂದುವರಿದಿದೆ. ಇದರೊಂದಿಗೆ ಜಾತಿ ಆಧಾರಿತ ವಿಭಜನೆಯೂ ಈ ಪದ್ಧತಿ ದೊಡ್ಡ ಮಟ್ಟದಲ್ಲಿ ಮುಂದುವರಿದುಕೊಂಡು ಬರಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ಪುನರ್ವಸತಿ ಯೋಜನೆಯ ಪ್ರಕಾರ, ಮಲಹೊರುವ ಕಾರ್ಮಿಕರು ಒಂದು ಬಾರಿ ರೂ. 40,000 ನಗದು ನೆರವು ಪಡೆಯಲಿದ್ದಾರೆ. ಮಲ್ಲಿಕಾರ್ಜುನ ಪ್ರಕಾರ, ಈವರೆಗೆ ಸುಮಾರು 1,500 ಮಂದಿಗೆ ಒಂದು ಬಾರಿಯ ನಗದು ನೆರವು ಹಾಗೂ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಇದರಿಂದ ಅವರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಲಿದ್ದಾರೆ ಎಂದು ಹೇಳಿದ್ದಾರೆ.
2020-21ನೇ ಸಾಲಿನ ಆಸುಪಾಸಿನಲ್ಲಿ ಮಲಹೊರುವ ಕಾರ್ಮಿಕರಿಗೆ ಕಡೆಯ ಬಾರಿ ಒಂದು ಬಾರಿಯ ನಗದು ನೆರವನ್ನು ವಿತರಿಸಲಾಗಿತ್ತು ಎಂಬ ಸಂಗತಿಯನ್ನು ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.