‘ವಾಡಿಕೆಯಂತೆ’ ಹೊಸ ನಕಾಶೆಗಳ ಬಿಡುಗಡೆ, ಭಾರತ ‘ಅನಗತ್ಯ ವಿವರಣೆ’ ಕೊಡುವ ಅಗತ್ಯವಿಲ್ಲ: ಚೀನಾ
ಭಾರತದ ಭೂಭಾಗಗಳನ್ನು ಒಳಗೊಂಡ ನಕಾಶೆಗೆ ಚೀನಾ ಸಮರ್ಥನೆ
ಅರುಣಾಚಲಪ್ರದೇಶ ಮತ್ತು ಅಕ್ಸಾಯಿ ಚಿನ್ ಪ್ರದೇಶ | Photo: Twitter \ @Lailatweets_
ಹೊಸದಿಲ್ಲಿ: ಭಾರತದ ಭೂಭಾಗಗಳನ್ನು ಒಳಗೊಂಡ ತನ್ನ 2023ರ ನಕಾಶೆಯ ಬಿಡುಗಡೆಯನ್ನು ಚೀನಾ ಬುಧವಾರ ಸಮರ್ಥಿಸಿಕೊಂಡಿದೆ. ಇದೊಂದು ‘‘ಸಾಮಾನ್ಯ ಪದ್ಧತಿಯಾಗಿದೆ’’ ಎಂದು ಹೇಳಿರುವ ಅದು, ‘‘ಅದಕ್ಕೆ ಅನಗತ್ಯ ವಿವರಣೆ ನೀಡುವುದನ್ನು’’ ನಿಲ್ಲಿಸುವಂತೆ ಭಾರತಕ್ಕೆ ಹೇಳಿದೆ.
ಸೋಮವಾರ ಚೀನಾ ಬಿಡುಗಡೆ ಮಾಡಿರುವ ಹೊಸ ನಕಾಶೆಯಲ್ಲಿ ಇಡೀ ಅರುಣಾಚಲಪ್ರದೇಶ ಮತ್ತು ಅಕ್ಸಾಯಿ ಚಿನ್ ಪ್ರದೇಶವನ್ನು ಚೀನಾದ ಗಡಿಯೊಳಗೆ ತೋರಿಸಲಾಗಿದೆ. ಇದಕ್ಕೆ ಭಾರತ ಮಂಗಳವಾರ ‘‘ಪ್ರಬಲ ಪ್ರತಿಭಟನೆ’’ ಸಲ್ಲಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ಅತಿಕ್ರಮಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಹೇಳಿದ್ದಾರೆ.
ಚೀನಾದ ಹಿಂದಿನ ನಕಾಶೆಗಳಲ್ಲೂ ಭಾರತದ ಈ ಭೂಭಾಗಗಳನ್ನು ಚೀನಾ ಗಡಿಯೊಳಗೆ ಸೇರಿಸಲಾಗಿತ್ತಾದರೂ, ಹೊಸ ನಕಾಶೆಯಲ್ಲೂ ಈ ಪ್ರವೃತ್ತಿಯನ್ನು ಮುಂದುವರಿಸಿರುವುದು ಅನಗತ್ಯ ಕ್ರಮ ಎಂಬುದಾಗಿ ಭಾರತ ಭಾವಿಸಿದೆ. ಮುಖ್ಯವಾಗಿ ಗಡಿ ವಿಚಾರದಲ್ಲಿ ಈಗಾಗಲೇ ಉಭಯ ದೇಶಗಳ ನಡುವೆ ಇರುವ ಉದ್ವಿಗ್ನತೆಯನ್ನು ಚೀನಾದ ಈ ಕ್ರಮವು ಇನ್ನಷ್ಟು ಉಲ್ಬಣಿಸುತ್ತದೆ ಎಂದು ಅದು ಹೇಳಿದೆ.
ಚೀನಾವು ಬುಧವಾರ ಈ ನಕಾಶೆಗೆ ಸಂಬಂಧಿಸಿದ ಆಕ್ಷೇಪಗಳನ್ನು ತಳ್ಳಿಹಾಕಿದೆ.
ಭಾರತದ ಪ್ರತಿಭಟನೆಯ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಪ್ರಾಕೃತಿಕ ಸಂಪನ್ಮೂಲಗಳ ಸಚಿವಾಲಯ ಬಿಡುಗಡೆಗೊಳಿಸಿರುವ ನಕಾಶೆಯು ‘‘ವಾಡಿಕೆ’’ಯಾಗಿದೆ ಎಂದು ಹೇಳಿದರು.
‘‘ಕಾನೂನಿಗೆ ಅನುಗುಣವಾಗಿ ತನ್ನ ಸಾರ್ವಭೌಮತ್ವವನ್ನು ಪ್ರದರ್ಶಿಸುವುದು ಚೀನಾದ ಸಂಪ್ರದಾಯವಾಗಿದೆ’’ ಎಂದು ವಕ್ತಾರ ಹೇಳಿದರು. ‘‘ಎದುರು ಪಕ್ಷವು ವಸ್ತುನಿಷ್ಠವಾಗಿರುತ್ತದೆ ಮತ್ತು ಸಮಾಧಾನದಿಂದ ವ್ಯವಹರಿಸುತ್ತದೆ ಹಾಗೂ ಅನಗತ್ಯ ವಿವರಣೆ ನೀಡುವುದರಿಂದ ಹಿಂದೆ ಸರಿಯುತ್ತದೆ ಎಂದು ನಾವು ಆಶಿಸುತ್ತೇವೆ’’ ಎಂದರು.