ಹಳೆಯ ಬಾಕಿಗಳನ್ನು ತೀರಿಸಲು ವಿದೇಶಿ ಬ್ಯಾಂಕ್ಗಳಿಂದ 25,000 ಕೋಟಿ ರೂ. ಸಾಲ ಪಡೆಯಲು ಮುಂದಾದ ರಿಲಯನ್ಸ್
Reliance Industries
ಹೊಸದಿಲ್ಲಿ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ವಿದೇಶಿ ಬ್ಯಾಂಕ್ಗಳಿಂದ 3 ಬಿಲಿಯ ಡಾಲರ್ (ಸುಮಾರು 25,000 ಕೋಟಿ ರೂಪಾಯಿ)ನಷ್ಟು ಮೊತ್ತದ ಸಾಲ ಪಡೆಯಲು ಉತ್ಸುಕವಾಗಿದ್ದು, ಈಗಾಗಲೇ ವಿವಿಧ ಬ್ಯಾಂಕ್ಗಳೊಂದಿಗೆ ಮಾತುಕತೆಯಲ್ಲಿ ತೊಡಗಿದೆ ಎಂದು ‘ಬ್ಲೂಮ್ಬರ್ಗ್’ ವರದಿ ಮಾಡಿದೆ.
ತಾನು ಪಾವತಿಸಬೇಕಾಗಿರುವ ಬಾಕಿಗಳನ್ನು ಚುಕ್ತಾಗೊಳಿಸುವುದಕ್ಕಾಗಿ ರಿಲಯನ್ಸ್ ಈ ಸಾಲ ಪಡೆಯಲು ಮುಂದಾಗಿದೆ. 2025ರ ಮೊದಲ ತ್ರೈಮಾಸಿಕದಲ್ಲಿ ಈ ಸಾಲವನ್ನು ಬಳಸಿಕೊಳ್ಳಲಾಗುವುದು ಎಂದು ‘ಬ್ಲೂಮ್ಬರ್ಗ್’ ಹೇಳಿದೆ.
ರಿಲಯನ್ಸ್ ಗುಂಪು ಮುಂದಿನ ವರ್ಷ ಸುಮಾರು 2.9 ಬಿಲಿಯ ಡಾಲರ್ (ಸುಮಾರು 24,600 ಕೋಟಿ ರೂಪಾಯಿ) ಸಾಲವನ್ನು ಮರುಪಾವತಿಸಬೇಕಾಗಿದೆ.
ಕಳೆದ ವರ್ಷ ರಿಲಯನ್ಸ್ ಕಂಪೆನಿಯು 8 ಬಿಲಿಯ ಡಾಲರ್ (ಸುಮಾರು 700 ಕೋಟಿ ರೂಪಾಯಿ) ಸಾಲವನ್ನು ವಿದೇಶಿ ಬ್ಯಾಂಕ್ಗಳಿಂದ ಪಡೆದಿತ್ತು. ಅದು ಆ ಸಮಯದಲ್ಲಿ ಭಾರತೀಯ ಕಂಪೆನಿಯೊಂದು ಪಡೆದ ಅತಿ ಹೆಚ್ಚಿನ ವಿದೇಶಿ ಸಾಲವಾಗಿತ್ತು. ಸುಮಾರು 55 ಬ್ಯಾಂಕ್ಗಳು ಆ ಸಾಲವನ್ನು ನೀಡಿದ್ದವು.