ಮಂಗಳಸೂತ್ರ ಕಸಿಯಲಾಗುತ್ತಿದೆ ಎಂಬ ಆರೋಪ ನಿಜವಾಗಿದೆ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಹೊಸದಿಲ್ಲಿ: ಗೃಹಿಣಿಯರು ಚಿನ್ನದ ಆಭರಣಗಳನ್ನು ಒತ್ತೆ ಇಡುತ್ತಿರುವ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀವು ಮಹಿಳೆಯರ ಮಂಗಳಸೂತ್ರಗಳನ್ನು ಕಸಿಯಲಾಗುತ್ತಿದೆ ಎಂದು ನೀಡಿದ್ದ ಹೇಳಿಕೆ ನಿಜವಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಅವರು, “2019ರಿಂದ 2024ರ ನಡುವೆ ನಾಲ್ಕು ಕೋಟಿ ಮಹಿಳೆಯರು ತಮ್ಮ ಚಿನ್ನದ ಆಭರಣಗಳನ್ನು ಅಡವಿಟ್ಟು 4.7 ಲಕ್ಷ ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. 2024ರಲ್ಲಿ ಮಹಿಳೆಯರು ಪಡೆದಿರುವ ಸಾಲಗಳ ಪೈಕಿ ಶೇ. 38ರಷ್ಟು ಚಿನ್ನದ ಸಾಲಗಳಾಗಿವೆ. ಫೆಬ್ರವರಿ 2025ರಲ್ಲಿ ಬಿಡುಗಡೆ ಮಾಡಿರುವ ಆರ್ಬಿಐ ದತ್ತಾಂಶಗಳ ಪ್ರಕಾರ, ಒಂದು ವರ್ಷದಲ್ಲಿ ಪಡೆದಿರುವ ಚಿನ್ನದ ಸಾಲಗಳ ಪ್ರಮಾಣ ಶೇ. 71.3ರಷ್ಟು ಏರಿಕೆಯಾಗಿದೆ” ಎಂದು ಅವರು ಕಿಡಿ ಕಾರಿದ್ದಾರೆ.
“ನರೇಂದ್ರ ಮೋದಿಯವರೆ, ನೀವು ಮಂಗಳಸೂತ್ರಗಳನ್ನು ಕಸಿಯುವ ಕುರಿತು ಮಾತನಾಡಿದ್ದಿರಿ. ಅದೀಗ ನಿಜವಾಗಿದೆ. ನಿಮ್ಮ ಆಡಳಿತದಲ್ಲಿ ಮಹಿಳೆಯರು ತಮ್ಮ ಚಿನ್ನದ ಆಭರಣಗಳನ್ನು ಒತ್ತೆ ಇಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಮೊದಲು ನೀವು ನೋಟು ಅಮಾನ್ಯ ಮಾಡುವ ಮೂಲಕ ಮಹಿಳೆಯರ ಹಣವನ್ನು ನಾಪತ್ತೆ ಮಾಡಿದಿರಿ. ಈಗ, ಹಣದುಬ್ಬರ ಹಾಗೂ ಕುಸಿಯುತ್ತಿರುವ ಮನೆ ಉಳಿತಾಯದಿಂದ ಅವರು ತಮ್ಮ ಅತ್ಯಂತ ಅಮೂಲ್ಯವಾದ ಆಭರಣಗಳನ್ನು ಒತ್ತೆ ಇಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ” ಎಂದು ಅವರು ವಾಕ್ ಪ್ರಹಾರ ನಡೆಸಿದ್ದಾರೆ.
ಕಳೆದ ಬಾರಿಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ, “ಕಾಂಗ್ರೆಸ್ ಪಕ್ಷವು ಸಂಪತ್ತನ್ನು ಮರು ಹಂಚಿಕೆ ಮಾಡುವ ಮೂಲಕ ನಿಮ್ಮ ಮಂಗಳ ಸೂತ್ರಗಳನ್ನು ಕಸಿಯಲು ಹೊರಟಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ಕಾಂಗ್ರೆಸ್ ನಿರಾಕರಿಸಿತ್ತು.