ಪ್ರತಿಪಕ್ಷ ಮೈತ್ರಿಕೂಟಕ್ಕೆ ‘ಭಾರತ್’ ಮರುನಾಮಕರಣ : ಶಶಿ ತರೂರ್ ಸಲಹೆ
ಶಶಿ ತರೂರ್ | Photo: PTI
ಹೊಸದಿಲ್ಲಿ: ಇಂಡಿಯಾ-ಭಾರತ ನಾಮಕರಣ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಕಟುಟೀಕಾ ಪ್ರಹಾರ ನಡೆಸಿದ್ದಾರೆ. ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾಗೆ ‘‘ ಒಳಿತಿಗಾಗಿ, ಸೌಹಾರ್ದಕ್ಕಾಗಿ ಹಾಗೂ ನಾಳೆಯ ಜವಾಬ್ದಾರಿಯುತ ಪ್ರಗತಿಗಾಗಿನ ಮೈತ್ರಿಕೂಟ (ಭಾರತ್)’ ಎಂಬುದಾಗಿ ಮರುನಾಮಕರಣಗೊಳಿಸಬೇಕೆಂದು ಸಲಹೆ ನೀಡಿದ್ದಾರೆ. ಆಗ ಮಾತ್ರ ಹೆಸರುಗಳನ್ನು ಬದಲಾಯಿಸುವ ‘ಕಳಂಕಿತ’ ಆಟವನ್ನು ಕೇಂದ್ರದ ಆಡಳಿತಾರೂಢ ಬಿಜೆಪಿ ನಿಲ್ಲಿಸಬಹುದೆಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ತರೂರ್ ಅವರು ‘‘ ನಾವು ನಮ್ಮ ಮೈತ್ರಿಕೂಟವನ್ನು ‘ಒಳಿತು, ಸೌಹಾರ್ದತೆ ಹಾಗೂ ನಾಳೆಯ ಜವಾಬ್ದಾರಿಯುತ ಸುಧಾರಣೆಗಾಗಿನ ಮೈತ್ರಿಕೂಟ’ (ಭಾರತ್ )ವೆಂದು ಕರೆದುಕೊಳ್ಳಬಹುದಾಗಿದೆ. ಬಹುಶಃ ಆಗ ಕೇಂದ್ರದ ಆಡಳಿತಾರೂಢ ಪಕ್ಷವು, ಹೆಸರು ಬದಲಾಯಿಸುವ ಕಳಂಕಿತ ಆಟವನ್ನು ನಿಲ್ಲಿಸಬಹುದು’’ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಯುತ ಒಳಗೊಳ್ಳುವಿಕೆಯ ಮೈತ್ರಿಕೂಟ’(ಇಂಡಿಯಾ) ದ ಅಂಗಪಕ್ಷವಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪ್ರೆಸಿಡೆಂಟ್ ಆಫ್ ಇಂಡಿಯಾ (ಇಂಡಿಯಾದ ರಾಷ್ಟ್ರಪತಿ)’ ಎಂಬುದರ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ (ಭಾರತದ ರಾಷ್ಟ್ರಪತಿ)’ ಹೆಸರಿನಲ್ಲಿ ಜಿ20 ಔತಣಕೂಟಕ್ಕೆ ಆಹ್ವಾನಪತ್ರಗಳನ್ನು ನೀಡಿದ ಬಳಿಕ ‘ನಾಮಕರಣ’ ವಿವಾದ ಗರಿಗೆದರಿದೆ. ಮೋದಿ ಸರಕಾರವು ಇಂಡಿಯಾ ಎಂಬ ಹೆಸರನ್ನು ಕೈಬಿಟ್ಟು, ದೇಶದ ಹೆಸರನ್ನು ಭಾರತವೆಂಬುದಾಗಿ ಮಾತ್ರ ಉಳಿಸಿಕೊಳ್ಳುವ ಯೋಜನೆಯನ್ನು ಹೊಂದಿದೆಯೆಂದು ಪ್ರತಿಪಕ್ಷಗಳು ಆಪಾದಿಸಿವೆ.