ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನ
Photo: PTI
ಇಂಫಾಲ: ಬಿಗಿ ಭದ್ರತೆಯ ನಡುವೆ ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಎಪ್ರಿಲ್ 19 ರಂದು ಈ ಕೇಂದ್ರಗಳಲ್ಲಿ ನಡೆದ ಮತದಾನವನ್ನು ಅನೂರ್ಜಿತ ಎಂದು ಚುನಾವಣಾ ಆಯೋಗ ಘೋಷಿಸಿದ್ದು, ಬಳಿಕ, ಮತ್ತೊಮ್ಮೆ ಮತದಾನ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
11 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಶುಕ್ರವಾರ ನಡೆದ ಮತದಾನದ ವೇಳೆ ಈ ಪ್ರದೇಶದಲ್ಲಿ ಗಲಭೆ ಹಿಂಸಾಚಾರ ನಡೆದಿತ್ತು.
ಇಂದು (ಸೋಮವಾರ) ಬೆಳಗ್ಗಿನಿಂದ ಇದುವರೆಗೆ ಯಾವುದೇ ಗೊಂದಲ ಅಥವಾ ಹಿಂಸಾಚಾರ ವರದಿಯಾಗಿಲ್ಲ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆಗೆ ಮರು ಮತದಾನ ಆರಂಭವಾಯಿತು.
ಖುರೈ ಕ್ಷೇತ್ರದ ಮೊಯರಂಗಾಂಪು ಸಜೆಬ್ ಮತ್ತು ತೊಂಗಮ್ ಲೈಕೈ, ಕ್ಷೇತ್ರಗಾವೊ ಕ್ಷೇತ್ರದ ಬಾಮೊನ್ ಕಂಪು ಮತ್ತು ಇರಿಲ್ಬಂಗ್ನಲ್ಲಿ ತಲಾ ಎರಡು ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಥೋಂಗ್ಜುವಿನ ಖೊಂಗ್ಮನ್ ವಲಯ V ನಲ್ಲಿ, ಉರಿಪೋಕ್ ಕ್ಷೇತ್ರದ ಇರೊಯಿಶೆಂಬಾ ಪ್ರದೇಶದಲ್ಲಿ ಮೂರು ಮತ್ತು ಕೊಂತೌಜಾಮ್ನ ಖೈಡೆಮ್ ಮಖಾದಲ್ಲಿ ಮತ್ತೊಮ್ಮೆ ಮತದಾನ ನಡೆಯುತ್ತಿದೆ.
ಶುಕ್ರವಾರ ಗುಂಡಿನ ದಾಳಿ, ಬೆದರಿಕೆ, ಕೆಲವು ಮತಗಟ್ಟೆಗಳಲ್ಲಿ ಇವಿಎಂಗಳನ್ನು ನಾಶಪಡಿಸಿದ ಘಟನೆಗಳು ಮತ್ತು ಬೂತ್ ವಶಪಡಿಸಿಕೊಂಡ ಘಟನೆಗಳು ಸಂಘರ್ಷ ಪೀಡಿತ ಮಣಿಪುರದಲ್ಲಿ ನಡೆದಿತ್ತು.
ಶುಕ್ರವಾರದಂದು ಎರಡು ಲೋಕಸಭಾ ಕ್ಷೇತ್ರಗಳಾದ ಇನ್ನರ್ ಮಣಿಪುರ ಮತ್ತು ಔಟರ್ ಮಣಿಪುರದಲ್ಲಿ ಶೇಕಡಾ 72 ರಷ್ಟು ಮತದಾನವಾಗಿದೆ.