ಶೀತ ಜ್ವರದಂತಹ ಅನಾರೋಗ್ಯದ ಕುರಿತು ವರದಿ ಮಾಡಿ : ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ
ಏರಿಕೆಯಾಗುತ್ತಿರುವ ಕೋವಿಡ್-19 ಪ್ರಕರಣಗಳು
ಸಾಂದರ್ಭಿಕ ಚಿತ್ರ | Photo; freepik.com
ಕೋಲ್ಕತಾ : ಭಾರತದ ಹಲವು ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ ಶೀತಜ್ವರದಂತಹ ಅನಾರೋಗ್ಯ ಹಾಗೂ ತೀವ್ರ ಉಸಿರಾಟದ ತೊಂದರೆಯ ಬಗ್ಗೆ ನಿಗಾ ವಹಿಸುವಂತೆ ಹಾಗೂ ವರದಿ ಮಾಡುವಂತೆ ಕೇಂದ್ರ ಸರಕಾರ ಸೋಮವಾರ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ದೇಶದಲ್ಲಿ ಕೊರೋನಾ ವೈರಸ್ನ ಹೊಸ ಪ್ರಬೇಧ ಜೆಎನ್. 1 ಪ್ರಕರಣ ಪತ್ತೆಯಾದ ಬಳಿಕ ಕೇಂದ್ರ ಸರಕಾರ ಈ ಹೇಳಿಕೆ ನೀಡಿದೆ. ಭಾರತದ ಹವಾಮಾನದಲ್ಲಿ ಕೊರೋನ ವೈರಸ್ ಹಾಗೂ ಇತರ ರೋಗಕಾರಕಗಳು ಹರಡುವುದರಿಂದ ಜಿಲ್ಲಾ ಮಟ್ಟದ ವರೆಗೆ ಪರಿಸ್ಥಿತಿಯ ಕುರಿತು ನಿರಂತರ ನಿಗಾ ವಹಿಸುವುದು ಮುಖ್ಯವಾದುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಹಾಗೂ ವೈರಸ್ ನ ಹೊಸ ಪ್ರಬೇಧಗಳನ್ನು ಪತ್ತೆ ಹಚ್ಚಲು ಪಾಸಿಟಿವ್ ಮಾದರಿಗಳನ್ನು ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ ಪ್ರಯೋಗಾಲಯಗಳಿಗೆ ಕಳುಹಿಸಿಕೊಡುವಂತೆ ಸಚಿವಾಲಯ ರಾಜ್ಯ ಸರಕಾರಗಳಲ್ಲಿ ವಿನಂತಿಸಿದೆ.
ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ ಸೋಮವಾರ 1,828ಕ್ಕೆ ಏರಿಕೆಯಾಗಿದೆ ಎಂದು ndtv ವರದಿ ಮಾಡಿದೆ.
ಜೆಒನ್.1 ಪ್ರಬೇಧ ಪತ್ತೆಯಾದ ಕೇರಳದಲ್ಲಿ ಒಂದು ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಆದರೆ, ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ ಮುಖ್ಯಸ್ಥ ಡಾ. ಎನ್.ಕೆ. ಅರೋರಾ, ರೋಗಿಯ ಸಾವು ಹಲವು ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿದೆ. ಕೇವಲ ಕೊರೋನ ವೈರಸ್ ಉಪ ಪ್ರಬೇಧದಿಂದ ಅಲ್ಲ ಎಂದು ಹೇಳಿದ್ದಾರೆ.
ರೋಗ ಹರಡುವುದನ್ನು ಕಡಿಮೆ ಮಾಡಲು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅನುಸರಿಸುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.
ಕೋವಿಡ್-19ರ ಹರಡುವಿಕೆಯನ್ನು ತಡೆಗಟ್ಟಲು ಪರಿಷ್ಕೃತ ಕಣ್ಗಾವಲು ಕಾರ್ಯತಂತ್ರದ ಭಾಗವಾಗಿ ಜೂನ್ 2022ರಲ್ಲಿ ಹೊರಡಿಸಲಾದ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಅನುಸರಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಲಾಗಿದೆ.
‘‘ಆತಂಕಕ್ಕೆ ಒಳಗಾಗುವ ಯಾವುದೇ ಕಾರಣ ಇಲ್ಲ. ಮಾದರಿಯ ಸಂಖ್ಯೆ ತುಂಬಾ ಕಡಿಮೆ ಇದೆ. ಆದರೆ ಈ ಮಾದರಿಗಳನ್ನು ಎಲ್ಲಾ ರಾಜ್ಯಗಳಿಂದ ಸಂಗ್ರಹಿಸಲಾಗಿದೆ’’
ಡಾ. ಎನ್.ಕೆ. ಅರೋರಾ
- ಐಎನ್ಎಸ್ಎಸಿಒಜಿ ವರಿಷ್ಠ