ಕೇರಳ | ರಿಪೋರ್ಟರ್ ಲೈವ್ ಚಾನೆಲ್ ನ ಸಂಪಾದಕ ಅರುಣ್ ಕುಮಾರ್ ಸೇರಿ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
Photo | thenewsminute.com
ತಿರುವನಂತಪುರಂ : ಕೇರಳ ರಾಜ್ಯ ಕಲಾ ಉತ್ಸವದಲ್ಲಿ ಭಾಗವಹಿಸಿದ್ದ ಬಾಲಕಿ ಜೊತೆಗಿನ ಸಂವಾದಗಳ ವೀಡಿಯೊ ಪ್ರಸಾರದ ಬೆನ್ನಲ್ಲೇ ಮಲಯಾಳಂ ನ್ಯೂಸ್ ಚಾನೆಲ್ ರಿಪೋರ್ಟರ್ ಲೈವ್ ನ ಮೂವರು ಪತ್ರಕರ್ತರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈ ಕುರಿತು ತಿರುವನಂತಪುರಂ ಕಂಟೋನ್ಮೆಂಟ್ ಪೊಲೀಸರು ರಿಪೋರ್ಟರ್ ಲೈವ್ ಚಾನೆಲ್ ನ ಸಂಪಾದಕ ಅರುಣ್ ಕುಮಾರ್ ಕೆ, ವರದಿಗಾರ ಶಹಬಾಜ್ ಸೇರಿದಂತೆ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆವಿ ಮನೋಜ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಜನವರಿ 10ರಂದು ಆಯೋಗವು ವಿಡಿಯೋ ಕುರಿತು ವಾಹಿನಿಯಿಂದ ವಿವರಣೆ ಕೇಳಿತ್ತು. ರಿಪೋರ್ಟರ್ ಲೈವ್ ಚಾನೆಲ್ ನಲ್ಲಿ ಪ್ರಸಾರವಾದ ವೀಡಿಯೊ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಘಟನೆ ಬೆನ್ನಲ್ಲೇ ರಿಪೋರ್ಟರ್ ಲೈವ್ ಅದರ ಎಲ್ಲಾ ಪ್ಲಾಟ್ ಫಾರ್ಮ್ ಗಳಿಂದ ವೀಡಿಯೊವನ್ನು ತೆಗೆದುಹಾಕಿದೆ.
ಸಾಂಪ್ರದಾಯಿಕ ʼಒಪ್ಪನಾʼ ನೃತ್ಯ ಪ್ರದರ್ಶಿಸಿದ ಶಾಲಾ ಬಾಲಕಿಯನ್ನು ಉದ್ದೇಶಿಸಿ ʼನೀವು ಆ ಒಪ್ಪನಾ ಹುಡುಗಿಯನ್ನು ಮತ್ತೆ ನೋಡಿದ್ದೀರಾ?ʼ ಎಂದು ಶಹಬಾಜ್ ಗೆ ಅರುಣ್ ಅಣಕಿಸುವುದರೊಂದಿಗೆ ವೀಡಿಯೋ ಪ್ರಾರಂಭವಾಗಿದೆ. ವೀಡಿಯೊದಲ್ಲಿ 2012ರ ಮಲಯಾಳಂ ಚಲನಚಿತ್ರ ಉಸ್ತಾದ್ ಹೋಟೆಲ್ ನ ರೊಮ್ಯಾಂಟಿಕ್ ಹಾಡಿನೊಂದಿಗೆ ವರದಿಗಾರ ʼನೀವು ಚೆನ್ನಾಗಿ ಕಾಣುತ್ತೀರಿʼ ಎಂಬಂತಹ ಫ್ಲರ್ಟಿಂಗ್ ಟೀಕೆಗಳನ್ನು ಮಾಡುವುದನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. ಆದರೆ ವಿವಾದದ ಬೆನ್ನಲ್ಲೇ ವೀಡಿಯೊವನ್ನು ಪ್ಲಾಟ್ ಫಾರ್ಮ್ಗಳಿಂದ ತೆಗೆದು ಹಾಕಲಾಗಿದೆ.