ಗಣರಾಜ್ಯೋತ್ಸವ ಪ್ರಶಸ್ತಿ: ಉತ್ತರ ಪ್ರದೇಶ ಪೊಲೀಸರಿಗೆ ಸಿಂಹಪಾಲು

ಸಾಂದರ್ಭಿಕ ಚಿತ್ರ PC: x.com/indiatvnews
ಹೊಸದಿಲ್ಲಿ: ಗಣರಾಜ್ಯೋತ್ಸವ ಮುನ್ನಾದಿನ ಘೋಷಿಸಿರುವ ಶೌರ್ಯ, ವಿಶಿಷ್ಟ ಸೇವೆ ಮತ್ತು ಪ್ರಶಂಸನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ನೀಡಲಾಗುವ ಪ್ರಶಸ್ತಿಗಳಲ್ಲಿ ಉತ್ತರ ಪ್ರದೇಶ ಪೊಲೀಸರು ಸಿಂಹಪಾಲು ಪಡೆದಿದ್ದಾರೆ. ದೇಶದ 797 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದ್ದು, ಈ ಪೈಕಿ 95 ಮಂದಿ ಉತ್ತರ ಪ್ರದೇಶದವರು.
ಉತ್ತರ ಪ್ರದೇಶದ 33 ಮಂದಿ ಶೌರ್ಯ ಪ್ರಶಸ್ತಿ ಪಡೆದಿದ್ದು, ಇದರಲ್ಲಿ 17 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ 16 ಮಂದಿ ಅಗ್ನಿಶಾಮಕ ಸೇವೆಗಳ ಸಿಬ್ಬಂದಿ. ಕುಖ್ಯಾತ ರೌಡಿಗಳು ಮತ್ತು ಅಪರಾಧಿಗಳನ್ನು ಮಟ್ಟಹಾಕಲು ರಚಿಸಿದ್ದ ಎಸ್ ಟಿ ಎಫ್ ಸಿಬ್ಬಂದಿಯೂ ಇವರಲ್ಲಿ ಸೇರಿದ್ದಾರೆ.
2021ರ ಬಳಿಕ ಉತ್ತರ ಪ್ರದೇಶದ ಗರಿಷ್ಠ ಮಂದಿ ಪೊಲೀಸ್ ಸಿಬ್ಬಂದಿಗೆ ಈ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ ಜಮ್ಮು & ಕಾಶ್ಮೀರದ 272 ಮಂದಿಗೆ ಗಣರಾಜ್ಯೋತ್ಸವ ದಿನ ಮತ್ತು ಸ್ವಾತಂತ್ರ್ಯದಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಇದರಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಅಗ್ರ ಪಾಲು ಪಡೆದಿದ್ದರು.
ಕೇಂದ್ರೀಯ ಅರೆಮಿಲಿಟರಿ ಮತ್ತು ಪೊಲೀಸ್ ಪಡೆಗಳು, ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣೆ ಮತ್ತು ಸುಧಾರಣಾ ಸೇವೆಗಳ ಸಿಬ್ಬಂದಿ ಇವರಲ್ಲಿ ಸೇರಿದ್ದು, ಒಟ್ಟು 942 ಮಂದಿಗೆ ವಿವಿಧ ವರ್ಗಗಳಲ್ಲಿ ಗಣರಾಜ್ಯೋತ್ಸವ ಮುನ್ನಾ ದಿನ ಪ್ರಶಸ್ತಿ ಘೋಷಿಸಲಾಗಿದೆ. 95 ಮಂದಿಗೆ ಶೌರ್ಯ ಪ್ರಶಸ್ತಿ ನೀಡಲಾಗಿದ್ದು, ಈ ಪೈಕಿ 16 ಮಂದಿ ಅಗ್ನಿಶಾಮಕ ಸಿಬ್ಬಂದಿ ಸೇರಿದ್ದಾರೆ. 101 ಮಂದಿಗೆ ರಾಷ್ಟ್ರಪತಿ ಪ್ರಶಸ್ತಿಯನ್ನು ವಿಶಿಷ್ಟ ಸೇವೆಗಾಗಿ ಘೋಷಿಸಲಾಗಿದೆ. ಉಳಿದಂತೆ 746 ಮಂದಿಗೆ ವಿಶಿಷ್ಟ ಸೇವಾ ಪದಕ ನೀಡಲಾಗಿದೆ.