ಸಂಜಯ್ ಗಾಂಧಿ ಹೆಸರಿನ ಬಗ್ಗೆ ಅಸಮಾಧಾನ: ಆಸ್ಪತ್ರೆ ವಿವಾದ ಕುರಿತಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವರುಣ್ ಗಾಂಧಿ
Photo:PTI
ಅಮೇಥಿ: ರೋಗಿಯೊಬ್ಬರ ನಿಧನದ ನಂತರ ಅಮೇಥಿಯ ಸಂಜಯ್ ಗಾಂಧಿ ಆಸ್ಪತ್ರೆಯ ಪರವಾನಗಿಯನ್ನು ಅಮಾನತುಗೊಳಿಸಿರುವ ತಮ್ಮದೇ ಪಕ್ಷದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವರುಣ್ ಗಾಂಧಿ, “ಈ ಪ್ರಶ್ನೆಯು ಕೇವಲ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ 450 ಸಿಬ್ಬಂದಿಗಳ ಕುಟುಂಬಗಳಿಗೆ ಸಂಬಂಧಿಸಿದ್ದಲ್ಲ; ಬದಲಿಗೆ, ಉತ್ತರ ಪ್ರದೇಶದ ನೂರಾರು ಮಂದಿ ಸಾಮಾನ್ಯ ಜನರಿಗೆ ಸಂಬಂಧಿಸಿದ್ದು. ಅವರ ಬಳಲಿಕೆಗೆ ಮಾನವೀಯ ದೃಷ್ಟಿಕೋನ ನ್ಯಾಯ ಒದಗಿಸಬಲ್ಲದೆ ಹೊರತು ವ್ಯವಸ್ಥೆಯ ದುರಹಂಕಾರವಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಹೆಸರಿನ ಬಗೆಗಿನ ಅಸಮಾಧಾನದಿಂದ ಲಕ್ಷಾಂತರ ಮಂದಿಯ ಕೆಲಸವನ್ನು ಹಾಳುಗೆಡವಲಾಗುತ್ತಿದೆ” ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ಪತ್ರ ಬರೆದಿದ್ದ ವರುಣ್ ಗಾಂಧಿ, ಆಸ್ಪತ್ರೆಯ ಪರವಾನಗಿಯನ್ನು ಅಮಾನತುಗೊಳಿಸಿರುವುದರ ಕುರಿತು ಮರುಪರಿಶೀಲನೆ ನಡೆಸಬೇಕು ಎಂದು ಕೋರಿದ್ದರು. “ಅಮೇಥಿಯಲ್ಲಿನ ಸಂಜಯ್ ಗಾಂಧಿ ಆಸ್ಪತ್ರೆಯ ಪರವಾನಗಿಯನ್ನು ಸೂಕ್ತ ತನಿಖೆ ನಡೆಸದೆ ಕ್ಷಿಪ್ರವಾಗಿ ಅಮಾನತುಗೊಳಿಸಿರುವುದು ಈ ಸಂಸ್ಥೆಯನ್ನು ಅವಲಂಬಿಸಿರುವ ಎಲ್ಲ ವ್ಯಕ್ತಿಗಳಿಗೂ ಎಸಗಿರುವ ಅನ್ಯಾಯವಾಗಿದೆ” ಎಂದು ತಮ್ಮ ಪತ್ರದಲ್ಲಿ ಅವರು ವಿವರಿಸಿದ್ದರು.
ಸೆಪ್ಟೆಂಬರ್ 14ರಂದು ಕಿರು ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳಾ ರೋಗಿಯೊಬ್ಬರು ಮೃತಪಟ್ಟಿದ್ದರಿಂದ ಆಸ್ಪತ್ರೆಯ ಪರವಾನಗಿಯನ್ನು ಅಮಾನತುಗೊಳಿಸಿ, ಆಸ್ಪತ್ರೆಗೆ ಬೀಗ ಮುದ್ರೆ ಹಾಕಲಾಗಿತ್ತು.