ಬರ ಪರಿಹಾರ ನಿಧಿ ಬಿಡುಗಡೆ ಕುರಿತು ವಿವಾದವನ್ನು ನೀವೇ ಬಗೆಹರಿಸಿಕೊಳ್ಳಿ: ಕೇಂದ್ರ, ಕರ್ನಾಟಕಕ್ಕೆ ಸುಪ್ರೀಂ ನಿರ್ದೇಶನ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ : ಬರ ನಿರ್ವಹಣೆಗಾಗಿ ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ(ಎನ್ಡಿಆರ್ಎಫ್)ಯಿಂದ ಹಣಕಾಸು ನೆರವು ಬಿಡುಗಡೆ ಕುರಿತು ವಿವಾದವನ್ನು ಕೇಂದ್ರ ಮತ್ತು ಕರ್ನಾಟಕ ಸರಕಾರಗಳು ಬಗೆಹರಿಸಿಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ.
ಈ ವಿಷಯದಲ್ಲಿ ಅಫಿಡವಿಟ್ ಸಲ್ಲಿಸಲು ತನಗೆ ಕೊಂಚ ಕಾಲಾವಕಾಶ ಬೇಕು ಎಂದು ಕೇಂದ್ರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠಕ್ಕೆ ಮನವಿ ಮಾಡಿಕೊಂಡರು. ವಿವಾದವನ್ನು ನೀವೇ ಬಗೆಹರಿಸಿಕೊಳ್ಳಬೇಕು ಎಂದು ಪೀಠವು ಹೇಳಿತು.
ಬರ ನಿರ್ವಹಣೆಗಾಗಿ ರಾಜ್ಯಕ್ಕೆ ಎನ್ಡಿಆರ್ಎಫ್ನಿಂದ ಹಣಕಾಸು ನೆರವು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ಕರ್ನಾಟಕ ಸರಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಪೀಠವು,ಈವರೆಗೆ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಕರ್ನಾಟಕದ ಪರ ವಕೀಲರು,ರಾಜ್ಯವು 18,171 ಕೋ.ರೂ.ಗಳಿಗೆ ಮನವಿ ಸಲ್ಲಿಸಿದ್ದು,3,819 ಕೋ.ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜನವರಿಗೆ ನಿಗದಿಗೊಳಿಸಿತು.
ಎ.29ರಂದು ಕೇಂದ್ರವು ರಾಜ್ಯದಲ್ಲಿ ಬರ ನಿರ್ವಹಣೆಗಾಗಿ ಕರ್ನಾಟಕಕ್ಕೆ ಸುಮಾರು 3,400 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.
ಎನ್ಡಿಆರ್ಎಫ್ ಅಡಿ ಬರ ನಿರ್ವಹಣೆಗಾಗಿ ಪೂರ್ಣ ಹಣಕಾಸು ನೆರವನ್ನು ಬಿಡುಗಡೆಗೊಳಿಸದಿರುವ ಕೇಂದ್ರದ ನಿರ್ಧಾರವನ್ನು ಸಂವಿಧಾನದ 14 ಮತ್ತು 21ನೇ ವಿಧಿಗಳಡಿ ರಾಜ್ಯದ ಜನತೆಯ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಘೋಷಿಸುವಂತೆ ಕರ್ನಾಟಕ ಸರಕಾರವು ಅರ್ಜಿಯಲ್ಲಿ ಕೋರಿದೆ.
ರಾಜ್ಯವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು,ಜನರ ಬದುಕುಗಳು ತೊಂದರೆಗೀಡಾಗಿವೆ. 236 ತಾಲೂಕುಗಳ ಪೈಕಿ 223ನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.