ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ; ಆದರೆ, ಚುನಾವಣಾ ಬಾಂಡ್ ರದ್ದುಗೊಳಿಸುವ ಬದಲು ಸುಧಾರಿಸಬಹುದಿತ್ತು: ಅಮಿತ್ ಶಾ
ಅಮಿತ್ ಶಾ | Photo: X \ @AmitShah
ಹೊಸದಿಲ್ಲಿ: ಚುನಾವಣಾ ಬಾಂಡ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುವುದಾಗಿ ಶುಕ್ರವಾರ ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣಾ ಬಾಂಡ್ ಯೋಜನೆಯನ್ನು ಕಪ್ಪು ಹಣವನ್ನು ಕೊನೆಗೊಳಿಸಲು ಪರಿಚಯಿಸಲಾಗಿತ್ತು. ಅದನ್ನು ರದ್ದುಗೊಳಿಸುವ ಬದಲು ಮತ್ತಷ್ಟು ಸುಧಾರಿಸಬಹುದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ʼಇಂಡಿಯಾ ಟುಡೆ ಕಾನ್ ಕ್ಲೇವ್ʼ ನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಭಾರತದ ರಾಜಕಾರಣದಲ್ಲಿ ಕಪ್ಪು ಹಣವನ್ನು ಕೊನೆಗೊಳಿಸಲು ಚುನಾವಣಾ ಬಾಂಡ್ ಅನ್ನು ಪರಿಚಯಿಸಲಾಗಿತ್ತು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಸ್ವೀಕರಿಸಬೇಕು. ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ, ಚುನಾವಣಾ ಬಾಂಡ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು, ಅದನ್ನು ಮತ್ತಷ್ಟು ಸುಧಾರಿಸಬಹುದಿತ್ತು” ಎಂದು ಪ್ರತಿಪಾದಿಸಿದ್ದಾರೆ.
ಚುನಾವಣಾ ಬಾಂಡ್ ಅನ್ನು ಟೀಕಿಸುತ್ತಿರುವ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, “ಕಾಂಗ್ರೆಸ್ ನಾಯಕರು ಚುನಾವಣಾ ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸುತ್ತಿದ್ದರು. ಹೀಗೆ ರೂ. 1,100 ಸ್ವೀಕರಿಸಿದರೆ, ಅದರ ಪೈಕಿ ರೂ. 100 ಅನ್ನು ಪಕ್ಷಕ್ಕೆ ನೀಡಿ, ಉಳಿದ ರೂ. 1,000 ಅನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದರು. ಕಾಂಗ್ರೆಸ್ ಈ ವ್ಯವಸ್ಥೆಯನ್ನು ಹಲವಾರು ವರ್ಷಗಳಿಂದ ಪೋಷಿಸಿಕೊಂಡು ಬಂದಿತ್ತು” ಎಂದು ಹರಿಹಾಯ್ದರು.