ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಮೂವರು ಕುಕಿ ಗ್ರಾಮಸ್ಥರ ಹತ್ಯೆ
ಸಾಂದರ್ಭಿಕ ಚಿತ್ರ Photo: PTI
ಗುವಾಹತಿ: ಮಣಿಪುರದಲ್ಲಿ ಎರಡು ವಾರಗಳ ಬಳಿಕ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಶಂಕಿತ ಉಗ್ರರು ನಾಗಾ ಪ್ರಾಬಲ್ಯದ ಉಖ್ರುಲ್ ಎಂಬಲ್ಲಿ ಮೂವರು ಕುಕಿ ಗ್ರಾಮಸ್ಥರನ್ನು ಶುಕ್ರವಾರ ಹತ್ಯೆ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದಿನಗಳಿಂದ ಜನಾಂಗೀಯ ಸಂಘರ್ಷ ನಡೆಯುತ್ತಿರುವ ರಾಜ್ಯದಲ್ಲಿ ಆಗಸ್ಟ್ 5ರ ಬಳಿಕ ವರದಿಯಾದ ಮೊದಲ ಹಿಂಸಾಕೃತ್ಯ ಇದಾಗಿದೆ.
ಆದಿವಾಸಿ ಜನಾಂಗದ ಥಂಗ್ ಖೋಕೈ ಹಾಕಿಪ್ (31), ಜಂಖೋಗಿನ್ ಹಾಕಿನ್ (35) ಮತ್ತು ಹೊಲೆನ್ಸನ್ ಬಯಾಟ್ (20) ಅವರನ್ನು ಇರಿದು, ಮೊಣಕಾಲುಗಳನ್ನು ಮುರಿದು ತೀರಾ ಸನಿಹದಿಂದ ಗುಂಡಿಕ್ಕಿ ಸಾಯಿಸಲಾಗಿದೆ.
"ತೌಬಾಲ್ ಜಿಲ್ಲೆಯ ಯೆಯ್ರಿಪೋಕ್-ಚರಂಗ್ ಪೇಟೆ ರಸ್ತೆ ಜಂಕ್ಷನ್ನಲ್ಲಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಆಗಂತುಕ ಬಂದೂಕುಧಾರಿಗಳು ಮೂವರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಹತ್ಯೆಗೀಡಾದ ಮೂವರನ್ನು ಥೋವಯ್ ಗ್ರಾಮದ ಕಾವಲಿಗಾಗಿ ನಿಯೋಜಿಸಲಾಗಿತ್ತು. ತಮ್ಮ ಬಂಕರ್ಗಳಲ್ಲಿ ನಿದ್ದೆ ಮಾಡುತ್ತಿದ್ದಾಗ ಮುಂಜಾನೆ 5 ಗಂಟೆಯ ಸುಮಾರಿಗೆ ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸಣ್ಣ ಗುಂಪು ಈ ಪುಟ್ಟ ಗ್ರಾಮವನ್ನು ಪ್ರವೇಶಿಸಿದರು ಎನ್ನಲಾಗಿದೆ. ಹತ್ಯೆಯ ವಿಧಾನ ಮತ್ತು ದಾಳಿಯನ್ನು ನೋಡಿದಾಗ, ಹಂತಕರು ತರಬೇತಿ ಪಡೆದ ಉಗ್ರರು ಎನ್ನುವುದು ಖಚಿತವಾಗಿದೆ.
"ನಾಗಾ ಜನಾಂಗದ ಪ್ರಾಬಲ್ಯ ಇರುವ ಪ್ರದೇಶದ ಗುಡ್ಡಗಾಡು ಗ್ರಾಮದಲ್ಲಿ ಒಳಹೊಕ್ಕು ದಾಳಿ ನಡೆಸಲು ಕೇವಲ ಭಯೋತ್ಪಾದಕರಿಗೆ ಮಾತ್ರ ಸಾಧ್ಯ. ಬಹುಶಃ ಇವರು ಭಾರತ- ಮ್ಯಾನ್ಮಾರ್ ಗಡಿಯ ಮೂಲಕ ಆಗಮಿಸಿರಬೇಕು ಎಂದು ಮೂಲಗಳು ಹೇಳಿವೆ.
ಈ ಗ್ರಾಮಕ್ಕೆ ಅತ್ಯಂತ ಸನಿಹದಲ್ಲಿದ್ದ ಚೆಕ್ಪೋಸ್ಟ್, ಈ ಕುಕಿ ವಸಾಹತುವಿನಿಂದ 8 ಕಿಲೋಮೀಟರ್ ದೂರದಲ್ಲಿದ್ದು, ಇಲ್ಲಿ ತಂಗ್ ಖುಲ್ ನಾಗಾ ಸಮುದಾಯದವರು ವಾಸವಿದ್ದಾರೆ. ನಾಗಾ ಪ್ರದೇಶದಲ್ಲಿ ಕುಕಿಗಳ ಮೇಲೆ ನಡೆದಿರುವ ದಾಳಿ, ಉಭಯ ಸಮುದಾಯಗಳ ನಡುವೆ ಅಪನಂಬಿಕೆ ಸೃಷ್ಟಿಸುವ ಹುನ್ನಾರ ಎಂದು ಹೇಳಲಾಗುತ್ತಿದೆ.