ಐನ್ಸ್ಟೀನ್, ಮೌಂಟ್ ಬ್ಯಾಟನ್ಗೆ ನೆಹರೂ ಬರೆದಿದ್ದ ಪತ್ರಗಳನ್ನು ಹಿಂದಿರುಗಿಸಿ: ರಾಹುಲ್ ಗಾಂಧಿಗೆ ಕೇಂದ್ರ ಸರಕಾರ ಸೂಚನೆ
ರಾಹುಲ್ ಗಾಂಧಿ(PTI) , ಜವಾಹರಲಾಲ್ ನೆಹರೂ(NDTV)
ಹೊಸದಿಲ್ಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಸಂಬಂಧಿಸಿದ ಐತಿಹಾಸಿಕ ಪತ್ರಗಳ ಸಂಗ್ರಹವನ್ನು ಮರಳಿಸುವಂತೆ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂಚಿಸಿದೆ. 2008ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಲಭ್ಯವಿದ್ದ ಈ ಪತ್ರಗಳನ್ನು ಯುಪಿಎ ಮೈತ್ರಿಕೂಟದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಮನವಿಯ ಮೇರೆಗೆ ಸಾರ್ವಜನಿಕ ಲಭ್ಯತೆಯಿಂದ ಹಿಂಪಡೆಯಲಾಗಿತ್ತು ಹಾಗೂ ಖಾಸಗಿಯಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು.
20ನೇ ಶತಮಾನದ ಕೆಲವು ಖ್ಯಾತ ವ್ಯಕ್ತಿಗಳೊಂದಿಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ನಡೆಸಿದ್ದ ಖಾಸಗಿ ಪತ್ರ ವ್ಯವಹಾರಗಳನ್ನೊಳಗೊಂಡ 51 ಪೆಟ್ಟಿಗೆಯಷ್ಟು ಪತ್ರಗಳ ಸಂಗ್ರಹವನ್ನು 1971ರಲ್ಲಿ ಮೂಲತಃ ಜವಾಹರಲಾಲ್ ನೆಹರೂ ಸ್ಮಾರಕ ನಿಧಿಯು ಈ ಹಿಂದೆ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವಾಗಿದ್ದ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ ಹಸ್ತಾಂತರಿಸಿತ್ತು. ಈ ಪೈಕಿ ಆಲ್ಬರ್ಟ್ ಐನ್ಸ್ಟೀನ್, ಜಯಪ್ರಕಾಶ್ ನಾರಾಯಣ್, ಎಡ್ವಿನಾ ಮೌಂಟ್ಬ್ಯಾಟನ್, ಪದ್ಮಜಾ ನಾಯ್ಡು, ವಿಜಯ ಲಕ್ಷ್ಮಿ ಪಂಡಿತ್, ಅರುಣಾ ಅಸಫ್ ಅಲಿ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಬರೆದಿದ್ದ ಪತ್ರಗಳು ಸೇರಿವೆ.
"ಈ ದಾಖಲೆಗಳು ನೆಹರೂ ಕುಟುಂಬಕ್ಕೆ ವೈಯಕ್ತಿಕವಾಗಿ ಮಹತ್ವದ್ದಾಗಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಆದರೆ, ಐತಿಹಾಸಿಕ ವಸ್ತುಗಳು ಹೆಚ್ಚು ಪ್ರವೇಶಾವಕಾಶ ಪಡೆಯುವುದರಿಂದ ವಿದ್ವಾಂಸರು ಹಾಗೂ ಸಂಶೋಧಕರಿಗೆ ಹೆಚ್ಚು ಲಾಭವಾಗಲಿದೆ ಎಂದು ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಭಾವಿಸುತ್ತದೆ. ಕಾರ್ಯಸಾಧು ಪರಿಹಾರಕ್ಕೆ ನಿಮ್ಮ ಸಹಕಾರ ನೀಡಿದರೆ ನಾವು ಆಭಾರಿಗಳಾಗಿರುತ್ತೇವೆ" ಎಂದೂ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಪತ್ರದಲ್ಲಿ ಮನವಿ ಮಾಡಲಾಗಿದೆ.
ಸೆಪ್ಟೆಂಬರ್ 2024ರಲ್ಲಿ ನೆಹರೂ ಪತ್ರಗಳನ್ನು ಮರಳಿಸುವಂತೆ ಅಥವಾ ಆ ದಾಖಲೆಗಳನ್ನು ಡಿಜಟಲೀಕರಣಗೊಳಿಸುವಂತೆ ಸೋನಿಯಾ ಗಾಂಧಿಯವರೊಂದಿಗೆ ಪತ್ರ ವ್ಯವಹಾರ ನಡೆಸಿದ್ದ ನಂತರ, ರಾಹುಲ್ ಗಾಂಧಿಗೆ ಈ ಪತ್ರವನ್ನು ಬರೆಯಲಾಗಿದೆ.