ರಾಯಿಟರ್ಸ್ ಪತ್ರಕರ್ತನನ್ನು ಇಸ್ರೇಲ್ ವೈಮಾನಿಕ ದಾಳಿಯು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿತ್ತು: RSF
Picture credit: Reuters
ಜೆರುಸಲೇಂ: ರಾಯಿಟರ್ಸ್ ಪತ್ರಕರ್ತ ಸೇರಿದಂತೆ ಇತರ ಆರು ಮಂದಿ ಮಾಧ್ಯಮ ಉದ್ಯೋಗಿಗಳನ್ನು ಇಸ್ರೇಲ್-ಲೆಬನಾನ್ ಗಡಿಯ ಬಳಿ ನಡೆಯುತ್ತಿರುವ ವೈಮಾನಿಕ ದಾಳಿಯ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಳ್ಳಲಾಗಿತ್ತು. ಈ ಘಟನೆಯು ಇಸ್ರೇಲ್ ಸೇನಾಪಡೆ ಹಾಗೂ ಲೆಬನಾನ್ ಗುಂಪಾದ ಹಿಝ್ಬುಲ್ಲಾ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಚಿತ್ರೀಕರಿಸುವಾಗ ನಡೆದಿದೆ ಎಂದು ವರದಿಯಾಗಿದೆ.
RSFನ ಶಸ್ತ್ರಾಸ್ತ್ರ ವಿಶ್ಲೇಷಣೆಯ ಪ್ರಕಾರ, ಗುಂಡಿನ ದಾಳಿಯು ಪೂರ್ವದಿಂದ ನಡೆದಿದ್ದು, ಇಸ್ರೇಲ್ ಗಡಿ ಭಾಗದಿಂದ ಈ ಗುಂಡಿನ ದಾಳಿಯು ನಡೆದಿದೆ ಎಂದು ಹೇಳಲಾಗಿದೆ.
ಅ.13ರಂದು ನಡೆದಿದ್ದ ದಾಳಿಯ ಸಂದರ್ಭದಲ್ಲಿ ಇಸ್ಸಾಮ್ ಅಬ್ದಲ್ಲಾ (37) ಎಂದು ಗುರುತಿಸಲಾಗಿರುವ ಪತ್ರಕರ್ತ ತಮ್ಮ ಜೀವ ಕಳೆದುಕೊಂಡಿದ್ದರು. ಈ ಸಂಬಂಧ ಘಟನೆಯ ಮರುಸೃಷ್ಟಿ ವಿಡಿಯೊವನ್ನು ಬಿಡುಗಡೆ ಮಾಡಿರುವ ಪತ್ರಕರ್ತರ ಸ್ವಾತಂತ್ರ್ಯದ ಪರ ವಕಾಲತ್ತು ವಹಿಸುವುದಕ್ಕೆ ಹೆಸರಾಗಿರುವ ಆರ್ಎಸ್ಎಫ್, ಓರ್ವ ಪತ್ರಕರ್ತನ ಸಾವು ಹಾಗೂ ಹಲವಾರು ಮಂದಿಗೆ ಗಾಯವಾಗಿರುವ ಈ ಘಟನೆಯನ್ನು ದುರಂತಮಯ ಎಂದು ಬಣ್ಣಿಸಿದೆ.
ಆರ್ಎಸ್ಎಫ್ನ ತನಿಖೆಯ ಪ್ರಾಥಮಿಕ ಶೋಧನೆಯು ಪತ್ರಕರ್ತರು ಆಕಸ್ಮಿಕ ಸಂತ್ರಸ್ತರಾಗಿರಲಿಲ್ಲ ಎಂದು ಸೂಚಿಸುತ್ತಿದೆ. ‘Press’ ಎಂಬ ಸ್ಪಷ್ಟ ಗುರುತನ್ನು ಹೊಂದಿದ್ದ ಅವರ ವಾಹನವೊಂದನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆ ವಾಹನದ ಪಕ್ಕ ನಿಂತಿದ್ದ ಗುಂಪು ಪತ್ರಕರ್ತರನ್ನು ಹೊಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಸೇನಾಪಡೆಯು ಘಟನೆಯ ಕುರಿತು ತನ್ನ ವಿಷಾದ ವ್ಯಕ್ತಪಡಿಸಿದ್ದು, ಈ ವಿಚಾರದ ಕುರಿತು ಪರಿಶೀಲಿಸುತ್ತಿರುವುದಾಗಿ ಪ್ರತಿಪಾದಿಸಿದೆ.
ದಾಳಿಯು ಅತ್ಯಂತ ಕಡಿಮೆ ಅವಧಿಯಾದ 30 ಸೆಕೆಂಡ್ ಗಳಲ್ಲಿ ನಡೆದಿದ್ದು, ಒಂದೇ ದಿಕ್ಕಿನಿಂದ ನಡೆದಿರುವುದರಿಂದ ಅದು ನಿಖರ ಗುರಿ ಎಂಬುದನ್ನು ಸೂಚಿಸುತ್ತಿದೆ ಎಂದು ಆರ್ಎಸ್ಎಫ್ ವರದಿ ಒತ್ತಿ ಹೇಳಿದೆ. ಪತ್ರಕರ್ತರು ಹೋರಾಟಗಾರರಾಗಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ. ಅವರು ಅಡಗಿ ಕುಳಿತಿರಲಿಲ್ಲ; ಬದಲಿಗೆ, ಅವರು ಬೆಟ್ಟವೊಂದರ ಬಯಲ ಮೇಲೆ ಒಂದು ಗಂಟೆಗೂ ಹೆಚ್ಚು ಕಾಲದಿಂದ ಇದ್ದರು. ಅವರನ್ನು ‘Press’ ಎಂದು ಗುರುತು ಮಾಡಲಾಗಿದ್ದ ಹೆಲ್ಮೆಟ್ ಗಳು ಹಾಗೂ ಬುಲೆಟ್ ನಿರೋಧಕ ಮೇಲ್ವಸ್ತ್ರಗಳೊಂದಿಗೆ ಸಜ್ಜುಗೊಳಿಸಲಾಗಿತ್ತು. ಇದರೊಂದಿಗೆ ಪ್ರತ್ಯಕ್ಷದರ್ಶಿಗಳು ದೃಢಪಡಿಸಿರುವಂತೆ ಅವರ ವಾಹನಗಳ ಮೇಲೂ ‘Press’ ಎಂಬ ಗುರುತು ಪಟ್ಟಿಯನ್ನು ಕಣ್ಣಿಗೆ ಕಾಣುವಂತೆ ಹಚ್ಚಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಅ.7ರಂದು ಹಮಾಸ್ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಉಲ್ಬಣಗೊಂಡಿರುವ ಕದನದಲ್ಲಿ ಈವರೆಗೆ ಕನಿಷ್ಠ ಪಕ್ಷ 34 ಫೆಲೆಸ್ತೀನ್ ಪತ್ರಕರ್ತರು ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.