ಮಧ್ಯಪ್ರದೇಶ | ವರ್ಗಾವಣೆ ತಪ್ಪಿಸಿಕೊಳ್ಳಲು ಬ್ರೈನ್ ಟ್ಯೂಮರ್ ನೆಪ ಹೇಳಿದ 10 ಮಂದಿ ಶಿಕ್ಷಕರು : ತನಿಖೆ ಆದೇಶಿಸಿದ ರೇವಾ ಜಿಲ್ಲಾಡಳಿತ
ಸಾಂದರ್ಭಿಕ ಚಿತ್ರ
ಭೋಪಾಲ್: ಬದ್ರಾ ಗ್ರಾಮದಲ್ಲಿನ ಸರಕಾರಿ ಮಾಧ್ಯಮಿಕ ಶಾಲೆಯ ಕನಿಷ್ಠ 10 ಮಂದಿ ಶಿಕ್ಷಕರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವುದಾಗಿ ವರದಿ ಮಾಡಿಕೊಂಡಿರುವುದರಿಂದ, ಮಧ್ಯಪ್ರದೇಶದ ರೇವಾ ಜಿಲ್ಲಾಡಳಿತವು ಈ ಕುರಿತು ತನಿಖೆಗೆ ಆದೇಶ ನೀಡಿದೆ. ಇದಲ್ಲದೆ, ಗಂಭೀರ ಅಸ್ವಸ್ಥತೆಯನ್ನು ವರದಿ ಮಾಡಿಕೊಂಡಿರುವ ಇನ್ನಿತರ ಶಿಕ್ಷಕರ ಕುರಿತೂ ಈ ತನಿಖೆ ನಡೆಯಲಿದೆ ಎಂದು ವರದಿಯಾಗಿದೆ.
ವರ್ಗಾವಣೆಯನ್ನು ಕಡ್ಡಾಯಗೊಳಿಸಲಾಗಿರುವ 2022ರ ಸರಕಾರಿ ನೀತಿಯನ್ನು ತಪ್ಪಿಸಿಕೊಳ್ಳಲು ಇಂತಹ ಆರೋಗ್ಯ ಸಮಸ್ಯೆಗಳನ್ನು ಮುಂದುಮಾಡಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ತನಿಖೆಗೆ ಆದೇಶ ನೀಡಲಾಗಿದೆ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಶಿಕ್ಷಕರನ್ನು ವರ್ಗಾವಣೆ ಪ್ರಕ್ರಿಯೆಯಿಂದ ದೂರ ಉಳಿಸಲು ಈ ನೀತಿಯಲ್ಲಿ ಗಂಭೀರ ಅಸ್ವಸ್ಥತೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು Times of India ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ರೇವಾ ಜಿಲ್ಲಾಧಿಕಾರಿ ಪ್ರತಿಭಾ ಪಾಲ್, “ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ. ಸಮಾಲೋಚನೆಗೆ ಬರಲಿರುವ ಎಲ್ಲ ಶಿಕ್ಷಕರಿಗೂ ಗಂಭೀರ ಅಸ್ವಸ್ಥತೆಯ ಕುರಿತು ವೈದ್ಯಕೀಯ ಮಂಡಳಿಯ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ನೈಜ ಪ್ರಕರಣಗಳಿರಬಹುದಾದರೂ, ತಪ್ಪು ಮಾಹಿತಿ ನೀಡಿರುವುದು ಕಂಡು ಬಂದರೆ, ಕ್ರಮ ಕೈಗೊಳ್ಳಲಾಗುವುದು. ಒಂದೇ ಶಾಲೆಯ 10 ಮಂದಿ ಶಿಕ್ಷಕರು ತಮಗೆ ಬ್ರೈನ್ ಟ್ಯೂಮರ್ ಇರುವುದಾಗಿ ಶೈಕ್ಷಣಿಕ ಪೋರ್ಟಲ್ ನಲ್ಲಿ ಮಾಹಿತಿ ಒದಗಿಸಿದ್ದಾರೆ. ಅಲ್ಲದೆ, ಜಿಲ್ಲೆಯ ಇನ್ನಿತರ ಹಲವಾರು ಶಿಕ್ಷಕರೂ ತಮಗೆ ಗಂಭೀರ ಆರೋಗ್ಯ ಸಮಸ್ಯೆ ಇರುವುದಾಗಿ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಮಂಡಳಿ ಮುಂದೆ ಪರೀಕ್ಷೆಗೆ ಹಾಜರಾಗಬೇಕು ಎಂಬ ಆದೇಶವು ಈ ಎಲ್ಲ ಶಿಕ್ಷಕರಿಗೂ ಅನ್ವಯವಾಗಲಿದೆ” ಎಂದು ತಿಳಿಸಿದ್ದಾರೆ.
ಪ್ರಶ್ನೆಗೊಳಗಾಗಿರುವ 2022ರ ಈ ಶಿಕ್ಷಣ ನೀತಿಯನ್ನು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಗಂಭೀರ ಆರೋಗ್ಯ ಸಮಸ್ಯೆ ಇರುವ ಶಿಕ್ಷಕರನ್ನು ವರ್ಗಾವಣೆಯಿಂದ ರಕ್ಷಿಸುವಂತೆ ರೂಪಿಸಲಾಗಿದೆ. ಈ ಪರಿಶೀಲನೆಯು ಶೈಕ್ಷಣಿಕ ಪೋರ್ಟಲ್ ನಲ್ಲಿ ಪ್ರತಿಪಾದಿಸಲಾಗಿರುವ ಅಂಶಗಳು ನಿಖರವಾಗಿವೆ ಹಾಗೂ ನೀತಿಯನ್ನು ಸಮರ್ಪಕವಾಗಿ ಅನ್ವಯಿಸಲಾಗಿದೆ ಎಂಬುದನ್ನು ಖಾತರಿ ಪಡಿಸಲಿದೆ.