ಎಪ್ರಿಲ್ 2ರಂದು ಲೋಕಸಭೆಯಲ್ಲಿ ಪರಿಷ್ಕೃತ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ

Credit: Sansad TV via PTI Photo
ಹೊಸದಿಲ್ಲಿ: ಎಪ್ರಿಲ್ 2ರಂದು (ಬುಧವಾರ) ಲೋಕಸಭೆಯ ಅನುಮೋದನೆಗಾಗಿ ಪರಿಷ್ಕೃತ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಲಿದ್ದು, ಈ ಮಸೂದೆ ಕುರಿತ ಚರ್ಚೆಗೆ ಸಂಸದೀಯ ಸಮಿತಿಯು ಎಂಟು ಗಂಟೆಗಳ ಕಾಲಾವಧಿಯನ್ನು ನಿಗದಿಗೊಳಿಸಿದೆ. ಆದರೆ, ಈ ಕುರಿತು ಚರ್ಚಿಸಲು ನಡೆದ ಸಂಸದೀಯ ಸಮಿತಿ ಸಭೆಯಿಂದ ವಿಪಕ್ಷಗಳು ಪ್ರತಿಭಟನಾರ್ಥ ಸಭಾತ್ಯಾಗ ಮಾಡಿದವು.
ಉದ್ದೇಶಿತ ಕರಡು ಕಾನೂನು ಮುಸ್ಲಿಮರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿ ವಿಪಕ್ಷಗಳು ಈ ಮಸೂದೆಯ ವಿರುದ್ಧ ಸಂಘರ್ಷಕ್ಕಿಳಿಯಲು ಸಜ್ಜಾಗುತ್ತಿದ್ದರೂ, ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಬುಧವಾರವೇ ಅನುಮೋದನೆ ಪಡೆದು, ಮರುದಿನ ರಾಜ್ಯಸಭೆಯಲ್ಲಿ ಮಂಡಿಸುವುದನ್ನು ಕೇಂದ್ರ ಸರಕಾರ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಂಟಿ ಸದನ ಸಮಿತಿಯ ತಿದ್ದುಪಡಿ ಸಲಹೆಗಳನ್ನು ಮಸೂದೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ, ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯ ನ್ಯೂನತೆಗಳನ್ನು ಸರಿಪಡಿಸಲಾಗಿದೆ ಹಾಗೂ ವಕ್ಫ್ ಸ್ವತ್ತುಗಳ ಆಡಳಿತ ಮತ್ತು ನಿರ್ವಹಣಾ ದಕ್ಷತೆಯನ್ನು ಸುಧಾರಿಸಲಾಗಿದೆ ಎಂದು ಸರಕಾರ ಪ್ರತಿಪಾದಿಸಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮಸೂದೆಯ ಕುರಿತು ಚರ್ಚಿಸಲು 12 ಗಂಟೆಗಳ ಕಾಲಾವಕಾಶವನ್ನು ನಿಗದಿಗೊಳಿಸಬೇಕು. ಹಾಗೆಯೇ, ಮಣಿಪುರದಲ್ಲಿನ ರಾಷ್ಟ್ರಪತಿ ಆಡಳಿತ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲು ಅವಕಾಶ ನೀಡಬೇಕು ಎಂದು ವಿಪಕ್ಷಗಳು ಏರಿದ ಧ್ವನಿಯಲ್ಲಿ ಆಗ್ರಹಿಸಿದವು ಎಂದು ಮೂಲಗಳು ತಿಳಿಸಿವೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೋಯಿ, ಕಾಂಗ್ರೆಸ್ ಮುಖ್ಯ ಸಚೇತಕ ಕೋಡಿಕುನ್ನಿಲ್ ಸುರೇಶ್, ಡಿಎಂಕೆಯ ದಯಾನಿಧಿ ಮಾರನ್ ಮತ್ತಿತರರು ಭಾಗವಹಿಸಿದ್ದ ಈ ಸಭೆಯು ನಮ್ಮ ಬೇಡಿಕೆಗಳನ್ನು ಒಪ್ಪದೆ ಇದ್ದುದರಿಂದ, ನಾವು ಸಭಾತ್ಯಾಗ ಮಾಡುವುದು ಅನಿವಾರ್ಯವಾಯಿತು ಎಂದು ವಿರೋಧ ಪಕ್ಷಗಳ ಮೂಲಗಳು ಹೇಳಿವೆ.
ಶಿವಸೇನೆ(ಉದ್ಧವ್ ಬಣ)ಯ ಅರವಿಂದ್ ಸಾವಂತ್ ಹಾಗೂ ಸಮಾಜವಾದಿ ಪಕ್ಷದ ಲಾಲ್ಜಿ ವರ್ಮರನ್ನು ಒಳಗೊಂಡಿದ್ದ ವಿರೋಧ ಪಕ್ಷಗಳ ಸಂಸದರು ವಕ್ಫ್ ತಿದ್ದುಪಡಿ ಮಸೂದೆ ಕುರಿತು ಚರ್ಚಿಸಲು 12 ಗಂಟೆಗಳ ಕಾಲಾವಕಾಶ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು. ಇಲ್ಲಿಯವರೆಗೆ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಘೋಷಣೆಯ ಕುರಿತು ಯಾವುದೇ ಚರ್ಚೆಯಾಗದಿರುವ ವಿಷಯವನ್ನೂ ಅವರು ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವಾಗಿನ ಚರ್ಚೆಗಾಗಲಿ ಅಥವಾ ಬಜೆಟ್ ಬಗೆಗಿನ ಚರ್ಚೆಗಾಗಲಿ ಅಷ್ಟು ಕಾಲಾವಕಾಶವನ್ನು ನಿಗದಿಗೊಳಿಸದೆ ಇರುವಾಗ, ಈ ಮಸೂದೆಗೆ ಮಾತ್ರ ಅಷ್ಟು ಕಾಲಾವಕಾಶವನ್ನು ನಿಗದಿಗೊಳಿಸಲು ಹೇಗೆ ಸಾಧ್ಯ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿಪಕ್ಷ ನಾಯಕರನ್ನು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.
ನಂತರ, ವಿಪಕ್ಷಗಳ ಸಂಸದರು ತಮ್ಮ ಬೇಡಿಕೆಯನ್ನು ಹತ್ತು ಗಂಟೆಗಳಿಗೆ ಇಳಿಕೆ ಮಾಡಿದರೂ, ಆ ಬೇಡಿಕೆ ಕೂಡಾ ಅಂಗೀಕಾರವಾಗಲಿಲ್ಲ. ಕಾರ್ಯಕಲಾಪ ಸಲಹಾ ಸಮಿತಿಯು ಎಂಟು ಗಂಟೆಗಳ ಕಾಲಾವಕಾಶಕ್ಕೇ ಅಂಟಿಕೊಂಡಿದ್ದರಿಂದ, ಕುಪಿತಗೊಂಡ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು ಎಂದು ಮೂಲಗಳು ತಿಳಿಸಿವೆ. ಮಣಿಪುರದಲ್ಲಿನ ರಾಷ್ಟ್ರಪತಿ ಆಡಳಿತದ ಕುರಿತೂ ಚರ್ಚೆ ನಡೆಯಬೇಕಿರುವುದರಿಂದ, ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ 12 ಗಂಟೆಗಳ ಕಾಲಾವಕಾಶ ನಿಗದಿಗೊಳಿಸಲು ಸಾಧ್ಯವಿಲ್ಲ ಎಂದು ಸರಕಾರ ಪಟ್ಟು ಹಿಡಿಯಿತು ಎಂದೂ ಅವು ಹೇಳಿವೆ.
ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಎಂಟು ಗಂಟೆಗಳ ಕಾಲಾವಕಾಶವನ್ನು ನಿಗದಿಗೊಳಿಸಲಾಗಿದ್ದು, ಸದನದ ಭಾವನೆಯನ್ನು ಆಧರಿಸಿ ಈ ಅವಧಿಯನ್ನು ವಿಸ್ತರಿಸಬಹುದಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು. "ಒಂದು ವೇಳೆ, ವಿರೋಧ ಪಕ್ಷಗಳಿಗೆ ಚರ್ಚೆ ಬೇಕಿಲ್ಲದಿದ್ದರೆ, ಅದನ್ನು ನಾನು ತಡೆಯಲು ಸಾಧ್ಯವಿಲ್ಲ. ಬುಧವಾರ ಪ್ರಶ್ನೋತ್ತರ ಕಲಾಪ ಮುಕ್ತಾಯಗೊಳ್ಳುತ್ತಿದ್ದಂತೆಯೇ, ಸದನದ ಪರಿಗಣನೆ ಹಾಗೂ ಅನುಮೋದನೆಗಾಗಿ ನಾನು ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಬಯಸುತ್ತಿದ್ದೇನೆ" ಎಂದು ಅವರು ತಿಳಿಸಿದರು.
ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಗೌರವ್ ಗೊಗೋಯಿ, ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಹಾಗೂ ವಿರೋಧ ಪಕ್ಷಗಳ ಸಲಹೆಗಳನ್ನು ಆಲಿಸದ ಸರಕಾರದ ಕಾರ್ಯಸೂಚಿಯನ್ನು ಪ್ರತಿಭಟಿಸಿ ನಾವು ಸಭಾತ್ಯಾಗ ಮಾಡಬೇಕಾಯಿತು. ನಾವು ಮತದಾರರ ಗುರುತಿನ ಚೀಟಿಯಲ್ಲದೆ, ಮಹತ್ವದ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು ಹಾಗೂ ಮಣಿಪುರದ ಕುರಿತೂ ಚರ್ಚಿಸಲು ಬಯಸಿದ್ದೆವು ಎಂದು ಹೇಳಿದರು.
"ಸದನವು ಸಂಪೂರ್ಣವಾಗಿ ಸರಕಾರದ ಅಡಿಯಾಳಾಗಿದೆ. ರಾಜಕೀಯ ನಾಯಕರ ಇಚ್ಛೆಗೆ ತಕ್ಕಂತೆ ಅದು ಕಾರ್ಯನಿರ್ವಹಿಸುತ್ತಿದೆ. ವಿರೋಧ ಪಕ್ಷಗಳಿಗೆ ಯಾವುದೇ ಅವಕಾಶ ನೀಡಲಾಗುತ್ತಿಲ್ಲ. ಸದನವು ಕೇವಲ ಒಂದು ಪಕ್ಷದ್ದಲ್ಲ, ಬದಲಿಗೆ ಜನರದ್ದು" ಎಂದು ಅವರು ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷಗಳನ್ನು ನಿರಂತರವಾಗಿ ಉಪೇಕ್ಷಿಸಲಾಗುತ್ತಿದೆ ಎಂದು ಡಿಎಂಕೆಯ ಹಿರಿಯ ಸಂಸದ ದಯಾನಿಧಿ ಮಾರನ್ ಆರೋಪಿಸಿದರೆ, "ನಾವು ಮಣಿಪುರದಂಥ ವಿಷಯಗಳ ಕುರಿತು ಚರ್ಚಿಸಲು ಬಯಸಿದರೆ, " ಸಮಯಾವಕಾಶ ಎಲ್ಲಿದೆ?" ಎಂಬ ಉತ್ತರ ನೀಡುವಂಥ ವಿಷಾದನೀಯ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಟಿಎಂಸಿಯ ಮುಖ್ಯ ಸಚೇತಕ ಬ್ಯಾನರ್ಜಿ ಆರೋಪಿಸಿದರು.
"ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ನಂತರ ಮಣಿಪುರದ ಕುರಿತು ಚರ್ಚಿಸಲಾಗುವುದು ಎಂದು ನಮಗೆ ತಿಳಿಸಲಾಗಿದೆ. ನೀವದನ್ನು ರಾತ್ರಿ 11 ಗಂಟೆ ಅಥವಾ ಮಧ್ಯರಾತ್ರಿ ಚರ್ಚಿಸಲು ಬಯಸುತ್ತಿದ್ದೀರಾ? ಕೇಂದ್ರ ಸರಕಾರವು ಲೋಕಸಭೆಯ ಘನತೆಯನ್ನು ಕುಂದಿಸಿದೆ" ಎಂದೂ ಅವರು ದೂರಿದರು.
ಸೌಜನ್ಯ: deccanherald.com