ತನ್ನ ಆಯ್ಕೆಯ ವ್ಯಕ್ತಿಯನ್ನು ವಿವಾಹವಾಗುವ ಹಕ್ಕು ಸಂವಿಧಾನದಿಂದ ರಕ್ಷಿಸಲ್ಪಟ್ಟಿದೆ, ಕುಟುಂಬ ಸದಸ್ಯರು ವಿರೋಧಿಸುವ ಹಾಗಿಲ್ಲ: ದಿಲ್ಲಿ ಹೈಕೋರ್ಟ್
ದಿಲ್ಲಿ ಹೈಕೋರ್ಟ್ (PTI)
ಹೊಸದಿಲ್ಲಿ: ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಸಂವಿಧಾನದಿಂದ ರಕ್ಷಿಸಲ್ಪಟ್ಟಿದೆ ಮತ್ತು ಇಂತಹ ವೈವಾಹಿಕ ಬಂಧನಕ್ಕೆ ಕುಟುಂಬ ಸದಸ್ಯರು ವಿರೋಧಿಸುವ ಹಾಗಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಮದುವೆಯಾದ ನಂತರ ಹುಡುಗಿಯ ಕುಟುಂಬದವರಿಂದ ಬೆದರಿಕೆಗಳು ಬರುತ್ತಿವೆ ಎಂದು ಹೇಳಿ ದಂಪತಿಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ತುಷಾರ್ ರಾವ್ ಗೆಡೆಲಾ ಅವರ ಪೀಠ ಈ ರೀತಿ ತೊಂದರೆಗೊಳಗಾಗಿರುವ ನಾಗರಿಕರನ್ನು ರಕ್ಷಿಸುವ ಸಂವಿಧಾನಿಕ ಬದ್ಧತೆ ಸರ್ಕಾರಕ್ಕಿದೆ ಎಂದು ಹೇಳಿದೆ.
ಅರ್ಜಿದಾರರು ವಯಸ್ಕರಾಗಿದ್ದಾರೆ ಹಾಗೂ ಅವರಿಗೆ ಪೊಲೀಸ್ ರಕ್ಷಣೆ ನೀಡಿ ಅವರಿಗೆ ಹೆತ್ತವರು ಅಥವಾ ಕುಟುಂಬದ ಇತರ ಸದಸ್ಯರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆಯಲ್ಲದೆ ಅವರಿಗೆ ರಕ್ಷಣೆಯೊದಗಿಸುವಂತೆ ಹಾಗೂ ಬೀಟ್ ಅಧಿಕಾರಿಗಳು ಪ್ರತಿ ದಿನ ಅವರನ್ನು ಸಂಪರ್ಕಿಸಿ ಅವರಿಗೆ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಖಾತ್ರಿಪಡಿಸಬೇಕೆಂದು ಹೇಳಿದರು.
ಹೆತ್ತವರ ವಿರೋಧದ ನಡುವೆ ತಾವು ಎಪ್ರಿಲ್ನಲ್ಲಿ ವಿವಾಹವಾಗಿದ್ದಾಗಿ ಅರ್ಜಿದಾರ ದಂಪತಿ ಹೇಳಿದ್ದಾರೆ.