ಹಜ್ ಯಾತ್ರೆ ಒಪ್ಪಂದ | ಸೌದಿ ಅರೇಬಿಯಾಗೆ ಐದು ದಿನಗಳ ಪ್ರವಾಸ ಕೈಗೊಂಡ ಕಿರಣ್ ರಿಜಿಜು
ಕಿರಣ್ ರಿಜಿಜು | PTI
ಹೊಸದಿಲ್ಲಿ: 2025ರ ಹಜ್ ಯಾತ್ತೆಯ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಐದು ದಿನಗಳ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರಳಿದರು. ಭಾರತವು ಹೆಚ್ಚುವರಿ 10,000 ಯಾತ್ರಾರ್ಥಿಗಳ ಪ್ರವಾಸಕ್ಕೆ ಅನುಮತಿ ಕೋರಿದೆ.
ಸೋಮವಾರ ಕಿರಣ್ ರಿಜಿಜು ಅವರು ಸೌದಿ ಅರೇಬಿಯಾ ಸಚಿವ ತೌಫಿಕ್ ಬಿನ್ ಪೌಝಾನ್ ಅಲ್ ರಬಿಯಾರನ್ನು ಭೇಟಿ ಮಾಡಲಿದ್ದು, ಅಂದು ಇಬ್ಬರೂ ನಾಯಕರು ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಮಾಡುವ ನಿರೀಕ್ಷೆ ಇದೆ.
“2025ರ ಹಜ್ ಯಾತ್ರೆ ಹಾಗೂ ನಮ್ಮೆರಡು ದೇಶಗಳ ನಡುವಿನ ಜನರ ನಡುವಿನ ಬಾಂಧ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಭಾಗವಾಗಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲು ಸೌದಿ ಅರೇಬಿಯಾ ಸಂಸ್ಥಾನಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದೇನೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೌದಿ ಅರೇಬಿಯಾದ ಸಾರಿಗೆ ಹಾಗೂ ಸರಕು ಸೇವಾ ಸಚಿವ ಸಾಲೆ ಅಲ್ ಜಾಸರ್ ಅವರನ್ನೂ ಕಿರಣ್ ರಿಜಿಜು ಭೇಟಿ ಮಾಡಲಿದ್ದು, ಅವರೊಂದಿಗೆ ಹಜ್ ವಿಮಾನ ಕಾರ್ಯಾಚರಣೆ ಹಾಗೂ ಯಾತ್ರಾರ್ಥಿಗಳಿಗೆ ಸಂಬಂಧಿಸಿದ ಬಸ್ ಮತ್ತು ರೈಲು ಸೇವೆಗಳ ಕುರಿತು ಚರ್ಚಿಸಲಿದ್ದಾರೆ.
ಕಿರಣ್ ರಿಜಿಜು ಅವರು ಭಾರತೀಯ ಯಾತ್ರಾರ್ಥಿಗಳು ಬಳಸುವ ಜಿದ್ದಾ ಹಜ್ ಟರ್ಮಿನಲ್ ಗೂ ಭೇಟಿ ನೀಡಲಿದ್ದು, ಅಲ್ಲಿ ಹಜ್ ಯಾತ್ರಾರ್ಥಿಗಳಿಗೆ ಸೌಕರ್ಯ ಕಲ್ಪಿಸಲು ಸರಕಾರ ಕಚೇರಿಯೊಂದನ್ನು ಮೀಸಲಿಟ್ಟಿದೆ.