ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂ ಮೆಟ್ಟಲೇರಲು ಆರ್ಜೆಡಿ ಸಿದ್ಧತೆ

ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರಶ್ನಿಸಿ ರಾಷ್ಟ್ರೀಯ ಜನತಾದಳ (ಆರ್ಜೆಡಿ)ವು ಎಪ್ರಿಲ್ 7ರಂದು ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಲೇರಲಿದೆ.
ವರದಿಗಳ ಪ್ರಕಾರ ಪಕ್ಷದ ನಾಯಕರಾದ ಮನೋಜ್ ಝಾ ಹಾಗೂ ಫಯಾಝ್ ಅಹ್ಮದ್ ಅವರು ಅರ್ಜಿಯನ್ನು ಸಲ್ಲಿಸಲಿದ್ದಾರೆ. ನೂತನವಾಗಿ ಅಂಗೀಕರಿಸಲಾದ ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿದೆ ಹಾಗೂ ಅವುಗಳಿಗೆ ಸಂವಿಧಾನಾತ್ಮಕವಾಗಿ ನೀಡಲಾದ ರಕ್ಷಣೆಯನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಲಿದ್ದಾರೆ.
ಸುದೀರ್ಘ ಚರ್ಚೆಯ ಬಳಿಕ ಎಪ್ರಿಲ್ 4ರಂದು ಸಂಸತ್ ನ ಉಭಯಸದನಗಳಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆಗೆ ವಿವಿಧ ಪ್ರತಿಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಅವುಗಳಲ್ಲಿ ಹಲವು ಈಗಾಗಲೇ ಕಾನೂನಿನ ಮೊರೆ ಹೋಗಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಮಸೂದೆಗೆ ಅಂಕಿತ ಹಾಕಿದ್ದಾರೆ.
ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೆದ್ ಅವರು ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ‘‘ಪರಿಷ್ಕೃತ ಮಸೂದೆಯು ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯವೆಸಗುತ್ತಿದೆ ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ’’ ಎಂದವರು ವಾದಿಸಿದ್ದರು. ಈ ಕಾಯ್ದೆಯು ಸಂವಿಧಾನದ 14,15,26,29 ಹಾಗೂ 300ಎ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಉವೈಸಿ, ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನನ್ ಕೂಡಾ ಶನಿವಾರ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಕಾಯ್ದೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ)ಯು ಘೋಷಿಸಿದೆ. ವಕ್ಫ್ ಆಸ್ತಿಗಳ ಬಗ್ಗೆ ಕೇಂದ್ರ ಸರಕಾರದ ನಿಲುವು ವಿಷಾದಕರವಾಗಿದೆ. ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ಹಾಗೂ ಕಾನೂನುಹೋರಾಟವನ್ನು ನಡೆಸುವುದಾಗಿ ಅದು ಹೇಳಿದೆ.
ಎನ್ಜಿಓ ಸಂಘಟನೆಯಾದ ‘ನಾಗರಿಕ ಹಕ್ಕುಗಳ ರಕ್ಷಣಾ ಸಂಘ’ ಕೂಡಾ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದೆ.