ಬ್ರಿಜ್‍ಭೂಷಣ್ ಪುತ್ರನಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಆರ್‌ಎಲ್‍ಡಿ ಮುಖಂಡ ರಾಜೀನಾಮೆ
ಮೀರಠ್: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣ್ ಸಿಂಗ್ ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಬಿಜೆಪಿಯ ಮಿತ್ರಪಕ್ಷವಾದ ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ವಕ್ತಾರ ರೋಹಿತ್ ಜಾಖಡ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
"ಬ್ರಿಜ್‍ಭೂಷಣ್ ಶರಣ್‍ಸಿಂಗ್ ಮೇಲೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವಿದೆ. ಅವರ ಪುತ್ರನಿಗೆ ಟಿಕೆಟ್ ನೀಡಿರುವುದು ಮಹಿಳಾ ಕುಸ್ತಿಪಟುಗಳಿಗೆ ಮಾಡಿರುವ ಅವಮಾನ. ನನಗೆ ದೇಶದ ಗೌರವ ಮುಖ್ಯ" ಎಂದು ಜಾಖಡ್ ಹೇಳಿದ್ದಾರೆ.
"ಪಕ್ಷದ ರಾಷ್ಟ್ರೀಯ ವಕ್ತಾರ ಹುದ್ದೆಗೆ ಮತ್ತು ರಾಷ್ಟ್ರೀಯ ಲೋಕದಳದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಪಕ್ಷದ ಅಧ್ಯಕ್ಷ ಜಯಂತ್ ಚೌಧರಿಯವರಿಗೆ ಶುಕ್ರವಾರ ಕಳುಹಿಸಿದ್ದೇನೆ" ಎಂದು ಜಾಟ್ ಸಮುದಾಐಕ್ಕೆ ಸೇರಿದ ಅವರು ಪಿಟಿಐ ಜತೆ ಮಾತನಾಡುತ್ತಾ ವಿವರಿಸಿದರು.
ತಾವು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಆದರೆ ಸಾಮಾಜಿಕ ಸಮಸ್ಯೆಗಳಿಗಾಗಿ ಹಿಂದಿನಂತೆ ಹೋರಾಟ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದರು. ರೋಹಿತ್ ಜಾಖಡ್ ಆರ್‍ಎಲ್‍ಡಿಯ ಅತ್ಯುನ್ನತ ನಾಯಕರಲ್ಲಿ ಒಬ್ಬರಾಗಿದ್ದು, ರಾಷ್ಟ್ರೀಯ ಜಾಟ್ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ. ಆರ್‍ಎಲ್‍ಡಿ ಮತ್ತು ರೈತರ ಚಳವಳಿ ಜತೆಗೆ ದಶಕಗಳಿಂದ ಅವರು ಗುರುತಿಸಿಕೊಂಡಿದ್ದರು.
ಬಿಜೆಪಿ ಗುರುವಾರ ಉತ್ತರ ಪ್ರದೇಶದ ಕೇಸರ್‍ಗಂಜ್ ಲೋಕಸಭಾ ಕ್ಷೇತ್ರದಿಂದ ಬ್ರಿಜ್‍ಭೂಷಣ್ ಪುತ್ರ ಕರಣ್ ಭೂಷಣ್ ಸಿಂಗ್ ಅವರನ್ನು ಕಣಕ್ಕೆ ಇಳಿಸಿದೆ.