ರಸ್ತೆ ನಿರ್ಮಾಣ ನಿಧಾನ: ಕೇವಲ ಶೇ.45ರಷ್ಟು ಕಾಮಗಾರಿ ಪೂರ್ಣ
Photo : PTI
ಹೊಸದಿಲ್ಲಿ : ಕೇಂದ್ರವು ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಭತ್ತು ತಿಂಗಳುಗಳಿಗೆ ದಾಖಲೆಯ 2.16 ಲಕ್ಷ ಕೋಟಿ ರೂ.ಗಳ ಬಂಡವಾಳ ವೆಚ್ಚವನ್ನು ನಿಗದಿಗೊಳಿಸಿದ್ದರೂ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಮಂದಗತಿ ಮುಂದುವರಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ದತ್ತಾಂಶಗಳಂತೆ 2023 ಎಪ್ರಿಲ್-ಡಿಸೆಂಬರ್ ಅವಧಿಯಲ್ಲಿ 6,216 ಕಿ.ಮೀ.ಗಳಷ್ಟು ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣಗೊಂಡಿವೆ. 13,800 ಕಿ.ಮೀ.ಹೆದ್ದಾರಿ ನಿರ್ಮಾಣ ಗುರಿಯನ್ನು ಹೊಂದಲಾಗಿದ್ದರೂ ಕೇವಲ ಶೇ.45ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಸಚಿವಾಲಯವು ಪ್ರಸಕ್ತ ವಿತ್ತವರ್ಷಕ್ಕೆ ತನ್ನ ಬಂಡವಾಳ ವೆಚ್ಚವನ್ನು 2,15,910 ಕೋ.ರೂ.ಗೆ ಹೆಚ್ಚಿಸಿದೆ ಮತ್ತು ಇದರಲ್ಲಿ ಗರಿಷ್ಠ ಪಾಲು ದೇಶದಲ್ಲಿ ಪ್ರಮುಖ ರಸ್ತೆ ನಿರ್ಮಾಣ ಎಜೆನ್ಸಿಯಾಗಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ಕ್ಕಾಗಿದೆ,ಆದರೂ ರಸ್ತೆ ನಿರ್ಮಾಣವು ನಿಧಾನಗೊಂಡಿದೆ.
ಈ ವರ್ಷ ಹೆದ್ದಾರಿ ನಿರ್ಮಾಣ ಕಾಮಗಾರಿಯು ವೇಗವನ್ನು ಪಡೆದುಕೊಂಡಿಲ್ಲದಿರಬಹುದು. ಆದರೂ ಅದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಮಟ್ಟದಲ್ಲಿದೆ. ಆ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 5,744 ಕಿ.ಮೀ.ಗಳಷ್ಟು ಹೆದ್ದಾರಿ ಪೂರ್ಣಗೊಂಡಿತ್ತು. ಕಳೆದ ವರ್ಷ 10,000 ಕಿ.ಮೀ.ಗೂ ಅಧಿಕ ಹೆದ್ದಾರಿಗಳನ್ನು ನಿರ್ಮಿಸಲಾಗಿತ್ತು. ಹೀಗಾಗಿ ಈ ವರ್ಷ ಅದಕ್ಕಿಂತ ಹೆಚ್ಚಿನ ಹೆದ್ದಾರಿಗಳು ನಿರ್ಮಾಣಗೊಳ್ಳಬಹುದು ಎಂಬ ಭರವಸೆಯಿದೆ. ಆದರೆ 13,800 ಕಿ.ಮೀ.ಗಳ ಗುರಿಯನ್ನು ಸಾಧಿಸಲು ಸಾಧ್ಯವಾಗದಿರಬಹುದು ಎಂದು ಬೆಳವಣಿಗೆಯನ್ನು ಬಲ್ಲ ಅಧಿಕಾರಿಯೋರ್ವರು ಹೇಳಿದರು.
ವಿತ್ತವರ್ಷ 2022ರಲ್ಲಿ 12,500 ಕಿ.ಮೀ.ಗುರಿಯ ಬದಲಾಗಿ 10,457 ಕಿ.ಮೀ. ಮತ್ತು ವಿತ್ತವರ್ಷ 2023ರಲ್ಲಿ 10,331 ಕಿ.ಮೀ. ಹೆದ್ದಾರಿಗಳು ಪೂರ್ಣಗೊಂಡಿದ್ದವು.
ರಸ್ತೆ ನಿರ್ಮಾಣ ಯೋಜನೆಗಳ ಗುತ್ತಿಗೆ ನೀಡುವಲ್ಲಿ ಕಳಪೆ ಪ್ರದರ್ಶನವು ಈ ವರ್ಷ ನಿರ್ಮಾಣದ ಮಂದಗತಿಯನ್ನು ಉಲ್ಬಣಗೊಳಿಸಿದೆ. ವಿತ್ತವರ್ಷ 2023ರ ಅವಧಿಯಲ್ಲಿನ 7,123 ಕಿ.ಮೀ.ಗೆ ಹೋಲಿಸಿದರೆ ಡಿಸೆಂಬರ್ ವರೆಗೆ ಸಚಿವಾಲಯವು ಕೇವಲ 3,111ಕಿ.ಮೀ.ರಸ್ತೆ ನಿರ್ಮಾಣ ಗುತ್ತಿಗೆಗಳನು ನೀಡಿದೆ. ಈ ವರ್ಷ ಗುತ್ತಿಗೆಗಳು 10,000 ಕಿ.ಮೀ. ಮೀರಬಹುದು ಎಂಬ ಭರವಸೆಯನ್ನು ಸಚಿವಾಲಯವು ಹೊಂದಿದ್ದರೂ ಅದು ಸುಲಭವಲ್ಲ ಎಂದು ತಜ್ಞರು ಭಾವಿಸಿದ್ದಾರೆ. ಸರಕಾರವು ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನವನ್ನು ಮುಂದುವರಿಸಿದೆ ಮತ್ತು ಈ ವರ್ಷ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ದಾಖಲೆಯ ಬಂಡವಾಳ ವೆಚ್ಚ ಹಂಚಿಕೆಯನ್ನು ಪಡೆದಿದೆ.
ಮುಂಬರುವ ನೂತನ ಸರಕಾರವು ಅನುಷ್ಠಾನಿಸಲಿರುವ ವಿಷನ್ 2047 ಕಾರ್ಯಕ್ರಮದಡಿ ಹೆದ್ದಾರಿಗಳ ನಿರ್ಮಾಣ ವೇಗ ಪಡೆದುಕೊಳ್ಳಲಿದೆ ಎಂದು ಸಚಿವಾಲಯವು ನಿರೀಕ್ಷಿಸಿದೆ. ಈ ಯೋಜನೆಯಡಿ ಮುಂದಿನ ಎರಡು ದಶಕಗಳಲ್ಲಿ 50,000 ಕಿ.ಮೀ.ಪ್ರವೇಶ ನಿಯಂತ್ರಿತ ಹೆದ್ದಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.