ಟಿ20 ವಿಶ್ವಕಪ್ ನಲ್ಲಿ ಇನಿಂಗ್ಸ್ ಆರಂಭಿಸಲು ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಸಜ್ಜು?
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ಜೂನ್ ನಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗಾಗಿ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ಡೈನಾಮಿಕ್ ಜೋಡಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರತದ ಪರ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, ಇಂತಹ ದಿಟ್ಟ ಹೆಜ್ಜೆ ಇಡುವ ಕುರಿತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಗಂಭೀರ ಚಿಂತನೆಯಲ್ಲಿದೆ.
ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ಆರಂಭಿಕ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಗ್ರ ಸರದಿಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಶತಕ ಹಾಗೂ ಎರಡು ಅರ್ಧಶತಕಗಳ ಸಹಿತ ಈಗಾಗಲೇ 361 ರನ್ ಗಳಿಸಿದ್ದಾರೆ. ಈ ಮೂಲಕ ಆರಂಭಿಕ ಆಟಗಾರನಾಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಆರಂಭಿಕ ಆಟಗಾರನಾಗಿ ಕೇವಲ 9 ಪಂದ್ಯಗಳಲ್ಲಿ ಆಡಿರುವ ಕೊಹ್ಲಿ 57ರ ಸರಾಸರಿಯಲ್ಲಿ 400 ರನ್ ಗಳಿಸಿದ್ದಾರೆ. ಆರಂಭಿಕ ಆಟಗಾರನಾದ ನಂತರ ಕೊಹ್ಲಿ ಅವರ ಸ್ಟ್ರೈಕ್ರೇಟ್ 138ರಿಂದ 161ಕ್ಕೆ ಏರಿಕೆಯಾಗಿದೆ.
ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಏಕೈಕ ಶತಕ ದಾಖಲಿಸಿದ್ದಾರೆ. 2022ರಲ್ಲಿ ಏಶ್ಯಕಪ್ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆರಂಭಿಕ ಬ್ಯಾಟರ್ ಆಗಿ ಕೊಹ್ಲಿ ಔಟಾಗದೆ 122 ರನ್ ಗಳಿಸಿದ್ದರು. ಇದು ಟಿ20 ಕ್ರಿಕೆಟ್ನಲ್ಲಿ ಭಾರತದ ಆಟಗಾರನ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.