ಅಸ್ಸಾಂ ಸಿಎಂ, ಇತರ ಗಣ್ಯರ ವಿಮಾನ ಪ್ರಯಾಣ ವೆಚ್ಚ ರೂ. 58 ಕೋಟಿ; ವಿಧಾನಸಭೆಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (PTI)
ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಖಾಸಗಿ ಭೇಟಿಗಳಿಗೂ ಸರ್ಕಾರಿ ವೆಚ್ಚದಲ್ಲಿ ವಿಮಾನಗಳಲ್ಲಿ ಪ್ರಯಾಣಿಸಿ ಸಾರ್ವಜನಿಕ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆಂಬ ವರದಿಗಳ ನಡುವೆ ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ ಮುಖ್ಯಮಂತ್ರಿ ಮತ್ತು ಇತರ ಗಣ್ಯರ ವಿಮಾನ ಪ್ರಯಾಣ ಸಂಬಂಧಿ ಖರ್ಚುವೆಚ್ಚಗಳ ಮಾಹಿತಿ ನೀಡಿದೆ. ಸರ್ಕಾರದ ಮಾಹಿತಿಯಂತೆ ಮೇ 10, 2021ರಿಂದ ಜನವರಿ 30, 2024ರ ತನಕ ಒಟ್ಟು ರೂ 58,23,07,104 ಖರ್ಚು ಮಾಡಲಾಗಿದೆ.
ಶಿವಸಾಗರ್ ಶಾಸಕ ಮತ್ತು ರೈಜೋರ್ ದಲ್ ನಾಯಕ ಅಖಿಲ್ ಗೊಗೊಯಿ ಅವರ ಲಿಖಿತ ಪ್ರಶ್ನೆಗಳಿಗೆ ಸರ್ಕಾರ ಈ ಉತ್ತರ ನೀಡಿದೆ.
ಆದರೆ ಮುಖ್ಯಮಂತ್ರಿ ಶರ್ಮ ಅವರ ವಿಮಾನ ಪ್ರಯಾಣ ವೆಚ್ಚಗಳ ಕುರಿತು ಪ್ರಶ್ನೆಯಿತ್ತಾದರೂ ಆ ಕುರಿತು ನಿರ್ದಿಷ್ಟ ಉತ್ತರ ದೊರಕಿಲ್ಲ.
ಸರ್ಕಾರ ನೀಡಿದ ಮಾಹಿತಿಯಂತೆ ಸಿಎಂ ಮತ್ತು ಇತರ ಗಣ್ಯರ ವಿಮಾನ ಪ್ರಯಾಣ ವೆಚ್ಚ ಮೇ 10, 2021 ಮತ್ತು ಡಿಸೆಂಬರ್ 31, 2022ರ ನಡುವೆ ರೂ 10,19,81,946 ಆಗಿದೆ. 2022-23ರಲ್ಲಿ ಈ ನಿಟ್ಟಿನಲ್ಲಿ ರೂ 34,01,05,848 ವೆಚ್ಚ ಆಗಿದೆ. ಜನವರಿ 2023ರಿಂದ ಜನವರಿ 2024ರ ನಡುವೆ ಸಿಎಂ ಮತ್ತು ಇತರ ಗಣ್ಯರ ವಿಮಾನ ಪ್ರಯಾಣ ವೆಚ್ಚ ರೂ 14,02,19,313 ಆಗಿದೆ.