ನಮ್ಮ ದೇವಾಲಯಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳು, ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡುವುದಿಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ
Photo- PTI
ತಿರುವಾಂಕೂರು: ಆರೆಸ್ಸೆಸ್ ಒಳಗೊಂಡಂತೆ ಮೂಲಭೂತವಾದವನ್ನು ಹರಡುವ ಯಾವುದೇ ಸಂಘಟನೆಗೆ ತನ್ನ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ಕಾರ್ಯಾಚರಣೆ ನಡೆಸಲು ಅವಕಾಶ ನೀಡಯವುದಿಲ್ಲವೆಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನ ಒಳಗೊಂಡಂತೆ ದಕ್ಷಿಣ ಭಾರತದ ನೂರಾರು ದೇವಾಲಯಗಳ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ನೋಡುಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿಯು ನಿಷೇಧಿಸಿದೆ.
ಹಾಗೆಯೇ ರಾಜಕೀಯ ಮತ್ತು ಕೋಮುವಾದಿ ಸಂಘಟನೆಗಳ ಚಿಹ್ನೆ ಹೊಂದಿರುವ ಜಾಹೀರಾತು ಫಲಕಗಳು ಮತ್ತು ದೇವಾಲಯಗಳೊಂದಿಗೆ ಸಂಬಂಧವಿಲ್ಲದ ವ್ಯಕ್ತಿಗಳ ಭಾವಚಿತ್ರವಿರುವ ಬಿತ್ತಿ ಫಲಕಗಳನ್ನೂ ಕೂಡಲೇ ತೆರವುಗೊಳಿಸಬೇಕು ಎಂದು ಅದು ಆದೇಶಿಸಿದೆ. ಈ ಹೊಸ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅದು ಪ್ರಕಟಿಸಿದೆ ಎಂದು thenewsminute.com ವರದಿ ಮಾಡಿದೆ.
ಈ ಹಿಂದೆಯೇ ತನ್ನ ವ್ಯಾಪ್ತಿಯ ದೇವಸ್ಥಾನಗಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ಮಂಡಳಿಯು ನಿಷೇಧಿಸಿದ್ದರೂ, ಈ ನಿಯಮಗಳ ಉಲ್ಲಂಘನೆಯಾಗುತ್ತಿರುವುದರಿಂದ ಮಂಡಳಿಯು ಈ ನಿರ್ಣಯವನ್ನು ಪುನರುಚ್ಚರಿಸಿದೆ. ಇದರೊಂದಿಗೆ, ದೇವಾಲಯದಲ್ಲಿ ಅಥವಾ ದೇವಸ್ಥಾನಗಳ ಸಮೀಪದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಅಥವಾ ಸಂಘಟನೆಗೆ ಸಂಬಂಧಿಸಿದ ಏಕವರ್ಣದ ಧ್ವಜಗಳ ಹಾರಾಟಕ್ಕೆ ಅವಕಾಶವಿಲ್ಲ ಎಂದೂ ಆದೇಶಿಸಲಾಗಿದೆ. ಯಾವುದೇ ಕರಪತ್ರ ಅಥವಾ ಮುದ್ರಿತ ತಿಳಿವಳಿಕೆ ಪತ್ರಗಳನ್ನು ದೇವಸ್ಥಾನಗಳ ವ್ಯಾಪ್ತಿಯಲ್ಲಿ ಹಂಚಬೇಕಿದ್ದರೆ ಸಹಾಯಕ ದೇವಸ್ವಂ ಅಧಿಕಾರಿಯ ಅನುಮತಿ ಪಡೆಯಬೇಕು ಹಾಗೂ ಅವನ್ನು ಹಂಚುವ ಮುನ್ನ, ಅವುಗಳ ಪ್ರತಿಯೊಂದನ್ನು ನೀಡಬೇಕು ಎಂದೂ ಸೂಚಿಸಲಾಗಿದೆ.