ಮಹಿಳೆಯರು ಮನೆಯಲ್ಲಿಯೇ ಇರಬೇಕು ಎಂದು ಆರೆಸ್ಸೆಸ್ ಬಯಸುತ್ತದೆ: ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆ
ರಾಹುಲ್ ಗಾಂಧಿ (PTI)
ವಾಷಿಂಗ್ಟನ್: ಮಹಿಳೆಯರು ನಿರ್ದಿಷ್ಟ ಪಾತ್ರಕ್ಕೆ ಸೀಮಿತವಾಗಿರಬೇಕು. ಅವರು ಮನೆಯಲ್ಲಿಯೇ ಇರಬೇಕು, ಆಹಾರ ತಯಾರಿಸಬೇಕು, ಹೆಚ್ಚು ಮಾತನಾಡಬಾರದು ಎಂದು ಆರೆಸ್ಸೆಸ್ ಮತ್ತು ಬಿಜೆಪಿ ಬಯಸುತ್ತದೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕ ಭೇಟಿಯಲ್ಲಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಡಲ್ಲಾಸ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರ ಬಗ್ಗೆ ಆರೆಸ್ಸೆಸ್ ಬಿಜೆಪಿ ಧೋರಣೆಗಳ ಬಗ್ಗೆ ಹರಿಹಾಯ್ದ ಅವರು, ಮಹಿಳೆಯರು ಏನು ಮಾಡಲು ಬಯಸುತ್ತಾರೆಯೋ ಅದನ್ನು ಮಾಡಲು ಅವಕಾಶ ನೀಡಬೇಕು ಎಂಬುದು ಕಾಂಗ್ರೆಸ್ ಧೋರಣೆ ಎಂದರು.
ಮಹಿಳೆಯರ ಬಗೆಗಿನ ವರ್ತನೆಯು ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಸೈದ್ಧಾಂತಿಕ ಹೋರಾಟದ ಭಾಗವಾಗಿದೆ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರು.
ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರೆಸ್ಸೆಸ್ ಭಾರತವನ್ನು ಒಂದು ಕಲ್ಪನೆ ಎಂದು ನಂಬುತ್ತದೆ. ಆದರೆ ಕಾಂಗ್ರೆಸ್ ಅದನ್ನು ಬಹುವಿಧದ ಕಲ್ಪನೆ ಎಂದು ಪರಿಗಣಿಸುತ್ತದೆ. ಅದುವೇ ಹೋರಾಟ ಎಂದು ಅವರು ಹೇಳಿದರು.
ಬಿಜೆಪಿಗೆ ಬಹುಮತವನ್ನು ನಿರಾಕರಿಸಿದ ಈ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಚುನಾವಣಾ ಫಲಿತಾಂಶದ ನಂತರ ಜನರಲ್ಲಿ "ಬಿಜೆಪಿಯ ಭಯ" ತಕ್ಷಣವೇ ಮಾಯವಾಯಿತು. ಚುನಾವಣಾ ಫಲಿತಾಂಶದ ಕೆಲವೇ ನಿಮಿಷಗಳಲ್ಲಿ, ಯಾರೂ ಬಿಜೆಪಿ ಮತ್ತು ಭಾರತದ ಪ್ರಧಾನಿಗೆ ಹೆದರಲಿಲ್ಲ" ಎಂದು ಅವರು ಹೇಳಿದರು.
ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ರಾಹುಲ್ ಗಾಂಧಿಗೆ ಭಾರತವನ್ನು ಅವಮಾನಿಸುವ ಅಭ್ಯಾಸವಿದೆ ಎಂದು ಹೇಳಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ರಾಹುಲ್ ಗಾಂಧಿ "ಚೀನಾ ಪರ ಬ್ಯಾಟಿಂಗ್ ಮಾಡಲು ಉತ್ಸುಕರಾಗಿದ್ದಾರೆ" ಎಂದು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ಚೀನಾದ ಕಮ್ಯುನಿಸ್ಟ್ ಪಾರ್ಟಿಯೊಂದಿಗಿನ ಅವರ ಒಪ್ಪಂದದ ಕಾರಣದಿಂದ ರಾಹುಲ್ ಗಾಂಧಿ ಯಾವಾಗಲೂ ಚೀನಾ ಪರ ಬ್ಯಾಟ್ ಮಾಡುತ್ತಾರೆ. ಅವರು ಭಾರತದ ಪರ ಬ್ಯಾಟಿಂಗ್ ಮಾಡುವರೇ? ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ಕಾರಣಕ್ಕಾಗಿ ಅವರು ಭಾರತೀಯ ಕಾನೂನು ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ. ಭಾರತದಲ್ಲಿ ವಿಭಜಿಸಿ ಆಳುವುದು ಅವರ ತಂತ್ರವಾಗಿದೆ", ಎಂದು ಪ್ರದೀಪ್ ಭಂಡಾರಿ ಕಿಡಿ ಕಾರಿದ್ದಾರೆ