ಕಾರ್ಯತಂತ್ರದ ಭಾಗವಾಗಿ ಆರೆಸ್ಸೆಸ್ ನಾಯಕರೊಬ್ಬರು ನನ್ನನ್ನು ಕಾಂಗ್ರೆಸ್ ಗೆ ಕಳಿಸಿದ್ದರು: ಬಿಜೆಪಿಗೆ ಮರಳಿದ ಬಳಿಕ ರಾಮ್ ಕಿಶೋರ್ ಶುಕ್ಲಾ ಸ್ಫೋಟಕ ಹೇಳಿಕೆ
ರಾಮ್ ಕಿಶೋರ್ ಶುಕ್ಲಾ (Photo credit: aajtak.in)
ಮಹಾಂವ್: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ನಾಯಕ ರಾಮ್ ಕಿಶೋರ್ ಶುಕ್ಲಾರ ಹೇಳಿಕೆಯೊಂದು ಮಧ್ಯಪ್ರದೇಶ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.
2023ರ ವಿಧಾನಸಭಾ ಚುನಾವಣೆ ಇನ್ನೇನು ಬಾಕಿ ಇರುವಾಗ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಹಾಗೂ ಆ ಕೂಡಲೇ ಕಾಂಗ್ರೆಸ್ ಪಕ್ಷದಿಂದ ಪ್ರತಿಷ್ಠಿತ ಮಹಾಂವ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ರಾಮ್ ಕಿಶೋರ್ ಶುಕ್ಲಾ, “ನನ್ನನ್ನು ಕಾಂಗ್ರೆಸ್ ಗೆ ಆರೆಸ್ಸೆಸ್ ಕಳಿಸಿತ್ತು” ಎಂದು ಹೇಳಿದ್ದಾರೆ.
ಆ ಚುನಾವಣೆಯಲ್ಲಿ ಕೇವಲ 29,144 ಮತಗಳನ್ನು ಪಡೆದಿದ್ದ ರಾಮ್ ಕಿಶೋರ್ ಶುಕ್ಲಾ ತಮ್ಮ ಠೇವಣಿಯನ್ನು ಕಳೆದುಕೊಂಡು ಮೂರನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.
ಬುಧವಾರ ಮಹಾಂವ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾ, “ಚುನಾವಣೆಗೆ ಕೆಲವೇ ದಿನಗಳಿರುವಾಗ ನಾನು ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿ, ಸ್ಪರ್ಧಿಸಿದೆ ಮತ್ತು ಪರಾಭವಗೊಂಡೆ. ಇದನ್ನೆಲ್ಲ ಚುನಾವಣಾ ಕಾರ್ಯತಂತ್ರದ ಭಾಗವಾಗಿ ನಾನು ಮಾಡಿದೆ ಹಾಗೂ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಹಿರಿಯ ಆರೆಸ್ಸೆಸ್ ನಾಯಕರೊಬ್ಬರು ನೀಡಿದ ನಿರ್ದೇಶನದನ್ವಯ ನಾನು ಹೀಗೆ ಮಾಡಿದೆ” ಎಂದು ಹೇಳಿದ್ದಾರೆ.
“ಇದರ ಹಿಂದಿದ್ದ ಕಾರಣ ಬಿಜೆಪಿ ಅಭ್ಯರ್ಥಿ ಉಷಾ ಠಾಕೂರ್ ಅವರ ದುರ್ಬಲ ಪರಿಸ್ಥಿತಿ. ಅವರ ಸ್ಪರ್ಧೆಗೆ ಪಕ್ಷದಲ್ಲಿ ದೊಡ್ಡ ಮಟ್ಟದ ವಿರೋಧವಿತ್ತು. ಮಾಜಿ ಶಾಸಕ ಅಂತರ್ ಸಿಂಗ್ ದರ್ಬಾರ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರು. ಈ ಎಲ್ಲ ಸಮೀಕರಣಗಳನ್ನು ನೋಡಿದ ನಂತರ ನಾನು ತ್ಯಾಗ ಮಾಡಲು ನಿರ್ಧರಿಸಿದೆ” ಎಂದು ಅವರು ವಿವರಿಸಿದ್ದಾರೆ. ದರ್ಬಾರ್ ಸಿಂಗ್ ಅವರನ್ನು ಸ್ವತಂತ್ರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದೂ ಕೂಡಾ ಬಿಜೆಪಿ ಎಂದೂ ಅವರು ಆರೋಪಿಸಿದ್ದಾರೆ.
ನಿಮಗೆ ಈ ಉಪಾಯವನ್ನು ಸೂಚಿಸಿದವರು ಯಾರು ಎಂಬ ಪ್ರಶ್ನೆಗೆ ವಿಶ್ವ ಹಿಂದೂ ಪರಿಷತ್ ನ ಇಂದೋರ್ ವಿಭಾಗದ ಸಂಘಟನಾ ಕಾರ್ಯದರ್ಶಿ ಅಭಿಷೇಕ್ ಉದೇನಿಯಾರನ್ನು ಶುಕ್ಲಾ ಹೆಸರಿಸಿದ್ದಾರೆ.
ರಾಮ್ ಕಿಶೋರ್ ಶುಕ್ಲಾರ ಈ ಹೇಳಿಕೆಯು ಕೂಡಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಧ್ಯಪ್ರದೇಶ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಂತರ್ ಸಿಂಗ್ ದರ್ಬಾರ್, ತಮ್ಮ ಪಕ್ಷದ ಸಹೋದ್ಯೋಗಿಯೂ ಆಗಿರುವ ರಾಮ್ ಕಿಶೋರ್ ಶುಕ್ಲಾರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವ ಬೆದರಿಕೆ ಒಡ್ಡಿದ್ದಾರೆ.
ಆದರೆ, ಶುಕ್ಲಾರ ಹೇಳಿಕೆಯನ್ನು ಆಧಾರ ರಹಿತ ಎಂದು VHP ನಾಯಕ ಅಭಿಷೇಕ್ ಉದೇನಿಯ ತಳ್ಳಿ ಹಾಕಿದ್ದಾರೆ. ಮಹಾವ್ ಶಾಸಕಿ ಉಷಾ ಠಾಕೂರ್ ಹಾಗೂ ಕಾಂಗ್ರೆಸ್ ವಕ್ತಾರ ಕೆ.ಕೆ.ಮಿಶ್ರಾ ಕೂಡಾ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಮಹಾಂವ್ ಕ್ಷೇತ್ರದಿಂದ ಬಿಜೆಪಿ ಹಿರಿಯ ನಾಯಕಿ ಉಷಾ ಠಾಕೂರ್ ಗೆಲುವು ಸಾಧಿಸಿದ್ದರು. ಅವರು ಮಾಜಿ ಕಾಂಗ್ರೆಸ್ ನಾಯಕ ಹಾಗೂ ಎರಡು ಬಾರಿಯ ಶಾಸಕ ಅಂತರ್ ಸಿಂಗ್ ದರ್ಬಾರ್ ಅವರನ್ನು 34,392 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆಗಷ್ಟೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ರಾಮ್ ಕಿಶೋರ್ ಶುಕ್ಲಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ಪ್ರತಿಭಟಿಸಿ, ಅಂತರ್ ಸಿಂಗ್ ದರ್ಬಾರ್ ಆ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಈಗ ರಾಮ್ ಕಿಶೋರ್ ಶರ್ಮ ಹಾಗೂ ಅಂತರ್ ಸಿಂಗ್ ಇಬ್ಬರೂ ಬಿಜೆಪಿಯಲ್ಲಿದ್ದಾರೆ. ಕಳೆದ ತಿಂಗಳು ಅಂತರ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾದರೆ, ಶುಕ್ಲಾ ನಾಲ್ಕು ದಿನಗಳ ಹಿಂದಷ್ಟೆ ಮಾತೃಪಕ್ಷ ಬಿಜೆಪಿಗೆ ಮರಳಿದ್ದರು.