ಉತ್ತರ ಪ್ರದೇಶ: ಬಿಜೆಪಿಯಲ್ಲಿನ ಅಂತಃಕಲಹ ಶಮನಿಸಲು ತನ್ನ ಪದಾಧಿಕಾರಿಗಳನ್ನು ನಿಯೋಜಿಸಿದ ಆರೆಸ್ಸೆಸ್
Photo : timesofindia
ಲಕ್ನೋ: ಕಳೆದ ರವಿವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ಬಳಿಕ ಆರೆಸ್ಸೆಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ತನ್ನ ಪದಾಧಿಕಾರಿಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ತಮ್ಮ ಭಾಷಣಗಳಲ್ಲಿ ಪರಸ್ಪರ ವ್ಯತಿರಿಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯವು ಸ್ಪಷ್ಟಗೊಂಡಿತ್ತು.
ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಅತಿಯಾದ ಆತ್ಮವಿಶ್ವಾಸವೇ ಕಾರಣವಾಗಿತ್ತು ಎಂದು ಯೋಗಿ ಹೇಳಿದ್ದರೆ, ಮೌರ್ಯ ಅವರು ಪಕ್ಷವು ಯಾವುದೇ ಸರಕಾರಕ್ಕಿಂತ ದೊಡ್ಡದು ಮತ್ತು ದೊಡ್ಡದಾಗಿಯೇ ಉಳಿಯಲಿದೆ ಎಂದು ಪ್ರತಿಪಾದಿಸಿದ್ದರು. ಕಾರ್ಯಕರ್ತರು ಅನುಭವಿಸಿದ ನೋವನ್ನು ತಾನೂ ಅನುಭವಿಸಿದ್ದೇನೆ ಎಂದು ಹೇಳಿದ್ದರು.
ಈ ಹೇಳಿಕೆಗಳು ರಾಜ್ಯ ಸರಕಾರ ಮತು ಪಕ್ಷದ ನಡುವೆ ಅಂತಃಕಲಹದ ವರದಿಗಳಿಗೆ ಪುಷ್ಟಿ ನೀಡಿವೆ. ಬಿಜೆಪಿ ಮತ್ತು ಯೋಗಿ ಸರಕಾರವನ್ನು ಟೀಕಿಸಲು ಈ ಅವಕಾಶವನ್ನು ಬಳಸಿಕೊಂಡಿರುವ ಎಸ್ಪಿ ವರಿಷ್ಠ ಅಖಿಲೇಶ್ ಯಾದವರಂತಹ ಪ್ರತಿಪಕ್ಷ ನಾಯಕರು ಆಂತರಿಕ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರವಿವಾರದ ಕಾರ್ಯಕಾರಿಣಿ ಸಭೆಯ ಎರಡು ದಿನಗಳ ಬಳಿಕ ಮೌರ್ಯ ಅವರಿಗೆ ದಿಲ್ಲಿಯಲ್ಲಿ ನಡ್ಡಾರನ್ನು ಭೇಟಿಯಾಗುವಂತೆ ಸೂಚಿಸಿದ್ದು ಉತ್ತರ ಪ್ರದೇಶ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗಳನ್ನು ಹುಟ್ಟು ಹಾಕಿದೆ.
ನಡ್ಡಾರ ಕಚೇರಿಯಿಂದ ಅಥವಾ ಮೌರ್ಯರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ, ಹೀಗಾಗಿ ಮೌರ್ಯ ಅವರಿಂದ ನಡ್ಡಾರ ಭೇಟಿಯ ಬಗ್ಗೆ ಇನ್ನಷ್ಟು ಊಹಾಪೋಹಗಳು ಗರಿಗೆದರಿವೆ.
ಮೌರ್ಯರು ನಡ್ಡಾರನ್ನು ಭೇಟಿಯಾದ ಬೆನ್ನಿಗೇ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ ಅವರೂ ನಡ್ಡಾರನ್ನು ಭೇಟಿಯಾಗಿದ್ದರು,ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು ಎನ್ನುವ ಅಂಶವು ವಿಷಯವನ್ನು ಇನ್ನಷ್ಟು ಜಟಿಲಗೊಳಿಸಿದೆ ಮತ್ತು ಬಿಜೆಪಿಯಲ್ಲಿ ಏನೋ ನಡೆಯುತ್ತಿದೆ ಎಂದು ವಿಶ್ಲೇಷಕರು ಭಾವಿಸುವಂತೆ ಮಾಡಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹಿರಿಯ ಆರೆಸ್ಸೆಸ್ ಪದಾಧಿಕಾರಿಗಳೂ ರಂಗಪ್ರವೇಶ ಮಾಡಿದ್ದಾರೆ. ಉತ್ತರ ಪ್ರದೇಶ ಬಿಜೆಪಿ ಮತ್ತು ಸರಕಾರದ ಹಲವು ನಾಯಕರನ್ನು ಭೇಟಿಯಾಗಿರುವ ಹಿರಿಯ ವಿಹಿಂಪ ಪದಾಧಿಕಾರಿಯೋರ್ವರು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಂತೆ ಮತ್ತು ಸರಕಾರ ಹಾಗೂ ಪಕ್ಷದ ಸುಧಾರಣೆಯ ನಿಟ್ಟಿನಲ್ಲಿ ಶ್ರಮಿಸುವಂತೆ ಆಗ್ರಹಿಸಿದ್ದಾರೆ.
ಜವಾಬ್ದಾರಿಯುತ ನಡವಳಿಕೆ ಮತ್ತು ಬಿಜೆಪಿ ನಾಯಕರು ಹಾಗೂ ಹಿರಿಯ ಸಚಿವರ ನಡುವೆ ಉತ್ತಮ ಸಮನ್ವಯತೆಗೆ ಕರೆ ನೀಡಿರುವ ಅವರು,ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪಕ್ಷೀಯರನ್ನು ಕೇಳಿಕೊಂಡಿದ್ದಾರೆ.
ಇದರ ಜೊತೆಗೆ ಪೂರ್ವ ಉತ್ತರ ಪ್ರದೇಶದ ಹಿರಿಯ ಪ್ರಚಾರಕರೋರ್ವರು ಮೌರ್ಯರ ಅಧಿಕೃತ ನಿವಾಸದಲ್ಲಿ ಅವರೊಂದಿಗೆ ಖಾಸಗಿ ಸಭೆಯನ್ನೂ ನಡೆಸಿದ್ದಾರೆ.
ಈ ಹಿರಿಯ ಪ್ರಚಾರಕರು ಸರಕಾರದಲ್ಲಿಯ ಇತರ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದೂ ಹೇಳಲಾಗಿದೆ. ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುವಂತೆ ಅವರು ಹಿರಿಯ ನಾಯಕರಿಗೆ ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ನಡುವೆ ಉಪಮುಖ್ಯಮಂತ್ರಿ ಬೃಜೇಶ್ ಪಾಠಕ್ ಅವರು ಮಾರ್ಗದರ್ಶನ ಮತ್ತು ಆಶೀರ್ವಾದಗಳನ್ನು ಪಡೆಯಲು ವಿಶ್ವ ಸಂವಾದ ಕೇಂದ್ರ ಸೇರಿದಂತೆ ಲಕ್ನೋದಲ್ಲಿ ಬಿಜೆಪಿಯ ಹಲವಾರು ಪ್ರಮುಖ ಕಚೇರಿಗಳಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ.