ಆರೆಸ್ಸೆಸ್ನಿಂದಾಗಿ ದೇಶದ ವಿವಿಗಳ ಸಮಗ್ರತೆಗೆ ಅಪಾಯ: ಕಾಂಗ್ರೆಸ್

ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ : ಆರೆಸ್ಸೆಸ್ ಪಿತೂರಿ ಸಿದ್ಧಾಂತಗಳ ಕುರಿತಾದ ಒಲವು ಹಾಗೂ ಅದರ ಬಾಲಿಶತನದ ಪ್ರವೃತ್ತಿಗಳಿಂದಾಗಿ ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳ ಬೌದ್ಧಿಕ ಸಮಗ್ರತೆ ಅಪಾಯಕ್ಕೆ ಸಿಲುಕಿದೆಯೆಂದು ಕಾಂಗ್ರೆಸ್ ಶುಕ್ರವಾರ ಆಪಾದಿಸಿದೆ.
ನೂತನ ಯುಜಿನಿ ನಿಯಾಮವಳಿಗಳು ವಿಶ್ವವಿದ್ಯಾನಿಲಯದ ಆವರಣಗಳಲ್ಲಿ ‘ಗಂಭೀರತೆ ರಹಿತ ರಾಜಕೀಯ’ವನ್ನು ಉತ್ತೇಜಿಸುವ ಏಕಮಾತ್ರ ಉದ್ದೇಶವನ್ನು ಹೊಂದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯೊಂದರಲ್ಲಿ ಆಪಾದಿಸಿದ್ದಾರೆ.
ಪತ್ರಕರ್ತ ಅರುಣ್ ಶ್ರೀವಾಸ್ತವ ಅವರು ಕಳೆದ ವರ್ಷ ಪ್ರಕಟಿಸಿದ ‘ ಮೋದಿ ವರ್ಸಸ್ ಖಾನ್ ಮಾರ್ಕೆಟ್ ಗ್ಯಾಂಗ್’ ಪುಸ್ತಕದ ಕುರಿತ ಚರ್ಚೆಯನ್ನು ದಿಲ್ಲಿ ವಿಶ್ವವಿದ್ಯಾನಿಲಯದ ಬೋಧಕವರ್ಗದ ಹಲವಾರು ಮಂದಿ ಖಂಡಿಸಿದ್ದರು ಎಂಬ ಮಾಧ್ಯಮ ವರದಿಯೊಂದನ್ನು ಅವರು ಉಲ್ಲೇಖಿಸಿದ್ದಾರೆ. ಗಾಂಭೀರ್ಯತೆಯಿಲ್ಲದ ಈ ಪುಸ್ತಕದ ಕುರಿತ ಚರ್ಚಾಗೋಷ್ಠಿಗೆ ಸ್ವತಃ ಉಪಕುಲಪತಿಯವರೇ ಆಗಮಿಸಿದ್ದರು ಎಂದವರು ಟೀಕಿಸಿದರು.
ಉಪಕುಲಪತಿಗಳ ನೇಮಕಾತಿ ಹಾಗೂ ಶೈಕ್ಷಣಿಕೇತರ ವಲಯದ ವ್ಯಕ್ತಿಗಳನ್ನು ವಿವಿಗಳಲ್ಲಿ ನೇಮಿಸುವ ಕುರಿತಾಗಿ ಯುಜಿಸಿ ರೂಪಿಸಿರುವ ಕರಡುನಿಯಮಾವಳಿಗಳು ವಿವಿ ಆವರಣಗಳಲ್ಲಿ ಗಂಭೀರತೆಯಿಲ್ಲದ ರಾಜಕೀಯವನ್ನು ಉತ್ತೇಜಿಸುವ ಏಕಮಾತ್ರ ಉದ್ದೇಶವನ್ನು ಹೊಂದಿವೆ ಎಂದವರು ಹೇಳಿದರು.
ಗುತ್ತಿಗೆಯ ಆಧಾರದಲ್ಲಿ ಪ್ರೊಫೆಸರ್ಗಳ ನೇಮಕಾತಿಗೆ ಇರುವ ಶೇ.10ರ ಮಿತಿಯನ್ನು ರದ್ದುಪಡಿಸಿರುವ ಯುಜಿಸಿಯ ಕರಡು ನಿಯಮಗಳು ಸಂವಿಧಾನ ವಿರೋಧಿಯಾಗಿದ್ದು, ಅವುಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.