ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಿಟ್ಟ 70,744 ಕೋಟಿ ರೂ. ಬಳಕೆಯಾಗದೆ ಇನ್ನೂ ಬಾಕಿ ಉಳಿದಿದೆ: RTI ಮಾಹಿತಿಯಲ್ಲಿ ಬಹಿರಂಗ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ವಿವಿಧ ರಾಜ್ಯಗಳ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಉದ್ಯೋಗದಾತರಿಂದ ಸಂಗ್ರಹಿಸಿದ 70,744.16 ಕೋಟಿ ರೂ.ಗಳ ಸೆಸ್ ಅನ್ನು ಇನ್ನೂ ಬಳಸಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ಆರ್ಟಿಐ ಉತ್ತರದಲ್ಲಿ ತಿಳಿಸಿದೆ. 2005ರಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ(ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯ್ದೆಯು ಜಾರಿಗೊಂಡಾಗಿನಿಂದ ಈ ಮಂಡಳಿಗಳು ಉದ್ಯೋಗದಾತರಿಂದ 1,17,507.22 ಕೋಟಿ ರೂ.ಗಳನ್ನು ಸೆಸ್ ರೂಪದಲ್ಲಿ ಸಂಗ್ರಹಿಸಿವೆ ಮತ್ತು ಕಾರ್ಮಿಕರಿಗೆ 67,669.92 ಕೋಟಿ ರೂ.ಮಂಜೂರು ಮಾಡಿವೆ.
1996ರಲ್ಲಿ ಅಂಗೀಕಾರಗೊಂಡಿದ್ದ ಕಾಯ್ದೆಯು ರಾಜ್ಯ ಸರಕಾರಗಳಿಂದ ಸ್ಥಾಪಿತ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳಿಗೆ ಉದ್ಯೋಗದಾತರಿಂದ ನಿರ್ಮಾಣ ವೆಚ್ಚದ ಶೇ.1ರಿಂದ ಶೇ.2ರಷ್ಟು ಮೊತ್ತವನ್ನು ಸೆಸ್ ರೂಪದಲ್ಲಿ ಸಂಗ್ರಹಿಸಲು ಅಧಿಕಾರ ನೀಡಿದೆ. 2024,ಸೆ.30ರವರೆಗೆ 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಲ್ಯಾಣ ಮಂಡಳಿಗಳಲ್ಲಿ 5,73,48,723 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. 2020ರಲ್ಲಿ ಕೋವಿಡ್ ಲಾಕ್ಡೌನ್ಗಳ ಸಂದರ್ಭದಲ್ಲಿ ನಿರ್ಮಾಣ ಕಾರ್ಮಿಕರು ತಮ್ಮ ಗ್ರಾಮಗಳಿಗೆ ವಾಪಸಾಗುತ್ತಿದ್ದಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅವರಿಗೆ ನೆರವಾಗಿರಲಿಲ್ಲ ಎಂಬ ದೂರುಗಳಿವೆ.
ಸಚಿವಾಲಯಕ್ಕೆ ಆರ್ಟಿಐ ಅರ್ಜಿಯನ್ನು ಸಲ್ಲಿಸಿದ್ದ ಭಾರತೀಯ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಅರ್ಕ ರಾಜಪಂಡಿತ ಅವರು,ಬಿಲ್ಡರ್ಗಳು ಮತ್ತು ಉದ್ಯೋಗದಾತರು ದೊಡ್ಡ ಪ್ರಮಾಣದಲ್ಲಿ ಸೆಸ್ ವಂಚಿಸಿರುವುದನ್ನು ದಾಖಲೆಗಳು ಸೂಚಿಸುತ್ತಿವೆ ಎಂದು ಹೇಳಿದರು. ಉದಾಹರಣೆಗೆ ಮಹಾರಾಷ್ಟ್ರದಲ್ಲಿ 19 ವರ್ಷಗಳಲ್ಲಿ ಸಂಗ್ರಹವಾದ ಒಟ್ಟು ಸೆಸ್ 19,489.25 ಕೋಟಿ ರೂ.,ಅಂದರೆ ಕಳೆದ 19 ವರ್ಷಗಳಲ್ಲಿ ರಾಜ್ಯದಲ್ಲಿ 19 ಲಕ್ಷ ಕೋಟಿ ರೂ.ಗಳ ನಿರ್ಮಾಣಗಳು ನಡೆದಿವೆ,ಪ್ರತಿ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ.ಗಳ ನಿರ್ಮಾಣಗಳು. ಈ ಅಂಕಿಅಂಶಗಳು ಸತ್ಯದಿಂದ ದೂರವಾಗಿವೆ. ರಾಜ್ಯದಲ್ಲಿ ಭಾರೀ ಪ್ರಮಾಣದ ಸೆಸ್ ವಂಚನೆ ನಡೆದಿರಬಹುದು ಎಂದರು. ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿತ ಸ್ಥಳೀಯ ಅಧಿಕಾರಿಗಳು ಅನುಮೋದಿಸಿದ್ದ ಕಟ್ಟಡ ಮತ್ತು ಇತರ ನಿರ್ಮಾಣ ಯೋಜನೆಗಳ ಒಟ್ಟು ವೆಚ್ಚದ ಬಗ್ಗೆ ಮಾಹಿತಿಯನ್ನು ಕೋರಿದ್ದರಾದರೂ,ಇಂತಹ ಮಾಹಿತಿ ತನ್ನಲ್ಲಿ ಲಭ್ಯವಿಲ್ಲ ಎಂದು ಸಚಿವಾಲಯವು ಉತ್ತರದಲ್ಲಿ ತಿಳಿಸಿದೆ.
ರಾಜ್ಯಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹಿಸಿದ ಒಟ್ಟು ಹಣದಲ್ಲಿ ಅತ್ಯಲ್ಪ ಮೊತ್ತವನ್ನು ಖರ್ಚು ಮಾಡಿವೆ ಎಂದು ಆಪಾದಿಸಿದ ಅವರು,ಕಾರ್ಮಿಕರಿಗೆ ಅವರ ನಿಗದಿತ ಪ್ರಯೋಜನಗಳನ್ನು ನಿರಾಕರಿಸಲಾಗಿದೆ ಎಂದು ಹೇಳಿದರು. ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರವು ಕಳೆದ 19 ವರ್ಷಗಳಲ್ಲಿ ತಾನು ಸಂಗ್ರಹಿಸಿದ್ದ ಸೆಸ್ ಮೊತ್ತದಲ್ಲಿ 13,683.18 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದರೆ ನಂತರದ ಸ್ಥಾನಗಳಲ್ಲಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ ಅನುಕ್ರಮವಾಗಿ 7,921.42 ಕೋಟಿ ರೂ. ಮತ್ತು 7,826.66 ಕೋಟಿ ರೂ.ಗಳನ್ನು ಕಾರ್ಮಿಕರಿಗಾಗಿ ವೆಚ್ಚ ಮಾಡಿವೆ. ಈ ಮೂರೂ ರಾಜ್ಯಗಳ ಖಾತೆಗಳಲ್ಲಿ ಅನುಕ್ರಮವಾಗಿ 9,731.83 ಕೋಟಿ ರೂ.,7,547.23 ಕೋಟಿ ರೂ. ಮತ್ತು 6,506.04 ಕೋಟಿ ರೂ.ಗಳು ಉಳಿದುಕೊಂಡಿವೆ.
‘ಕೇರಳವನ್ನು ಹೊರತುಪಡಿಸಿ ಹೆಚ್ಚಿನ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆಯನ್ನು ಜಾರಿಗೊಳಿಸುತ್ತಿಲ್ಲ ಎನ್ನುವುದನ್ನು ನಾವು ಗಮನಿಸಿದ್ದೇವೆ. ಕಾರ್ಮಿಕರಿಗೆ ನಿಗದಿತ ಸೌಲಭ್ಯಗಳನ್ನು ಮೊಟಕುಗೊಳಿಸಲಾಗುತ್ತಿದೆ. ಅನೇಕ ರಾಜ್ಯ ಸರಕಾರಗಳು ಎಡರಂಗದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಹೊರಗಿಡುವ ಉದ್ದೇಶದಿಂದ ಕಾರ್ಮಿಕ ಕಲ್ಯಾಣ ಮಂಡಳಿಗಳನ್ನು ಪುನರ್ರಚಿಸುತ್ತಿಲ್ಲ ಎಂದು ಹೇಳಿದ ರಾಜಪಂಡಿತ,ಕಲ್ಯಾಣ ಮಂಡಳಿಗಳಲ್ಲಿ ಲಭ್ಯವಿರುವ ಹಣವನ್ನು ರಾಜ್ಯದ ಬೊಕ್ಕಸಕ್ಕೆ ಸೇರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.