"RTI ಮಾಹಿತಿ ತಪ್ಪು": ಕಚ್ಚತೀವು ದ್ವೀಪದ ಕುರಿತು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಎಂ.ಕೆ. ಸ್ಟಾಲಿನ್
"ಅರುಣಾಚಲ ಪ್ರದೇಶದಲ್ಲಿ ತನ್ನ ಹಕ್ಕು ಪ್ರತಿಪಾದಿಸುತ್ತಿರುವ ಚೀನಾವನ್ನು ವಿರೋಧಿಸಲು ಪ್ರಧಾನಿಗೆ ಧೈರ್ಯವಿಲ್ಲ"
ಎಂ.ಕೆ.ಸ್ಟಾಲಿನ್ | Photo: PTI
ಚೆನ್ನೈ: ಲೋಕಸಭಾ ಚುನಾವಣೆಯು ಹತ್ತಿರದಲ್ಲಿರುವುದರಿಂದ ಬಿಜೆಪಿಯು ಕಚ್ಚತ್ತೀವು ದ್ವೀಪದ ಕುರಿತು ತಿಪ್ಪರಲಾಗ ಹಾಕುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಲೇವಡಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾವನ್ನು ಖಂಡಿಸಲಾಗಲಿ ಅಥವಾ ಅರುಣಾಚಲ ಪ್ರದೇಶದಲ್ಲಿ ತನ್ನ ಹಕ್ಕು ಪ್ರತಿಪಾದಿಸುತ್ತಿರುವ ಚೀನಾವನ್ನು ವಿರೋಧಿಸಲಾಗಲಿ ಧೈರ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ, ಅವರು ಹೇಗೆ ಕಚ್ಚತೀವು ದ್ವೀಪದ ಕುರಿತು ಮಾತನಾಡಲು ಸಾಧ್ಯ ಎಂದು ಅವರು ಪ್ರಶ್ನಿಡಸಿದ್ದಾರೆ.
ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಆಡಳಿತಾರೂಢ ಡಿಎಂಕೆ ಪಕ್ಷದ ಮುಖ್ಯಸ್ಥ ಸ್ಟಾಲಿನ್, ಮೋದಿ ನಾಟಕವಾಡುತ್ತಿದ್ದಾರೆ ಹಾಗೂ ಕಚ್ಚತೀವು ದ್ವೀಪದ ಕುರಿತು ಕತೆಗಳನ್ನು ಕಟ್ಟುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದು, ಮಾಹಿತಿ ಹಕ್ಕು ಅರ್ಜಿಯಲ್ಲಿ ಕೇಂದ್ರ ಸರಕಾರವು ಬಹಿರಂಗಪಡಿಸಿರುವ ಮಾಹಿತಿಯು ತಪ್ಪಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ದೇಶದ ಭದ್ರತೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಬಿಜೆಪಿಗೆ ಸೇರಿರುವ ತಮಿಳು ನಾಡು ಘಟಕದ ಮುಖ್ಯಸ್ಥ ಕೆ.ಅಣ್ಣಾಮಲೈಗೆ ಕೇಂದ್ರ ಸರಕಾರ ಹೇಗೆ ನೀಡಿತು ಎಂದೂ ಅವರು ಪ್ರಶ್ನಿ ಸಿದ್ದಾರೆ. ಮಾಹಿತಿ ಹಕ್ಕಿನಡಿ ನೀಡುವ ಇಂತಹ ದಾಖಲೆಗಳು ದೇಶದ ಭದ್ರತೆಗೆ ಸಂಬಂಧಿಸಿದ ದಾಖಲೆಗಳಾಗಿವೆ ಎಂದೂ ಅವರು ಟೀಕಿಸಿದ್ದಾರೆ.
“ಕಚ್ಚತೀವು ದ್ವೀಪದ ವಿಷಯವು ಸುಪ್ರೀಂ ಕೋರ್ಟ್ ಮುಂದಿರುವುದರಿಂದ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಕಚ್ಚತೀವು ಕುರಿತು ಕೇಂದ್ರ ಸರಕಾರವು ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ಇದಕ್ಕೂ 2015ರ ಬಿಜೆಪಿ ಸರಕಾರದ ಅವಧಿಯಲ್ಲಿ ಕಚ್ಚತೀವು ಎಂದಿಗೂ ಭಾರತದ ಭಾಗವಾಗಿರಲಿಲ್ಲ ಎಂದು ಹೇಳಿಕೆ ನೀಡಿತ್ತು. ಈ ಮಾಹಿತಿಯನ್ನು ಆಗ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ಎಸ್. ಜೈಶಂಕರ್ ಒದಗಿಸಿದ್ದರು. ಚುನಾವಣೆಯು ಸನಿಹದಲ್ಲಿರುವುದರಿಂದ ಅವರು ತಮಗೆ ಬೇಕಾದಂತೆ ಮಾಹಿತಿಯನ್ನು ತಿರುಚಿದ್ದಾರೆ. ಈ ತಿಪ್ಪರಲಾಗ ಯಾಕೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಕಚ್ಚತೀವು ದ್ವೀಪದ ಕುರಿತು ಈಗ ಮಾತನಾಡುತ್ತಿರುವ ಪ್ರಧಾನಿ ಮೋದಿ ತಮ್ಮ 10 ವರ್ಷಗಳ ಆಡಳಿತಾವಧಿಯಲ್ಲಿ ಒಮ್ಮೆಯಾದರೂ ಮೀನುಗಾರರನ್ನು ಬಂಧಿಸಿರುವ ಹಾಗೂ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ಕೃತ್ಯವನ್ನು ಖಂಡಿಸಿದ್ದಾರೆಯೆ? ಯಾಕೆ ಅವರು ಆ ಕೆಲಸ ಮಾಡಲಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.
ಅರುಣಾಚಲ ಪ್ರದೇಶದ ಮೇಲೆ ಹಕ್ಕು ಚಲಾಯಿಸುತ್ತಿರುವ ಚೀನಾ ಕುರಿತು ಪ್ರಧಾನಿ ಮೋದಿಯೇಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿರುವ ಸ್ಟಾಲಿನ್, “ಶ್ರೀಲಂಕಾವನ್ನು ಖಂಡಿಸಲು ಧೈರ್ಯವಿಲ್ಲ. ಚೀನಾವನ್ನು ವಿರೋಧಿಸಲು ಧೈರ್ಯವಿಲ್ಲ. ನೀವು ಹೇಗೆ ಕಚ್ಚತ್ತೀವು ದ್ವೀಪದ ಕುರಿತು ಮಾತನಾಡಲು ಸಾಧ್ಯರ” ಎಂದು ಕಿಡಿ ಕಾರಿದ್ದಾರೆ.