2019ರ ಲೋಕಸಭಾ ಚುನಾವಣೆಗಳಿಗೆ ಮೊದಲೇ ಹಲವಾರು ರಾಜ್ಯಗಳು ಇವಿಎಂ ವೈಫಲ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು: ಆರ್ಟಿಐ ಉತ್ತರದಿಂದ ಬಹಿರಂಗ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಮೊದಲ ಹಂತದ ತಪಾಸಣೆ (ಎಫ್ಎಲ್ಸಿ)ಯ ಸಂದರ್ಭದಲ್ಲಿ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳ ಬಿಡಿಭಾಗಗಳ ತುಲನಾತ್ಮಕವಾಗಿ ಹೆಚ್ಚಿನ ವೈಫಲ್ಯಗಳಿಂದಾಗಿ ಚುನಾವಣಾ ಆಯೋಗದೊಳಗೆ ಕಳವಳವಿತ್ತು ಎನ್ನುವುದನ್ನು ಆರ್ಟಿಐ ಕಾರ್ಯಕರ್ತರೋರ್ವರು ಪಡೆದುಕೊಂಡಿರುವ ದಾಖಲೆಗಳು ಬಹಿರಂಗಗೊಳಿಸಿವೆ ಎಂದು indianexpress.com ವರದಿ ಮಾಡಿದೆ.
ಚುನಾವಣೆಗೆ ಮುನ್ನ ಆರು ತಿಂಗಳ ಅವಧಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಡಿ ಇವಿಎಮ್ಗಳ ಎಫ್ಎಲ್ಸಿಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಇವಿಎಮ್ನ ಯಾವುದೇ ಬಿಡಿಭಾಗವು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಅದನ್ನು ದುರಸ್ತಿಗಾಗಿ ತಯಾರಕರಾದ ಬಿಇಎಲ್ ಅಥವಾ ಇಸಿಐಎಲ್ಗೆ ಕಳುಹಿಸಲಾಗುತ್ತದೆ.
ಕಳೆದ ಸಂಸತ್ ಚುನಾವಣೆಗಳಲ್ಲಿ ಮತದಾನದ ಸಂದರ್ಭದಲ್ಲಿ ಇವಿಎಮ್ಗಳು ಕೆಟ್ಟುಹೋಗಿದ್ದ ಘಟನೆಗಳು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದವು.
ಎಫ್ಎಲ್ಸಿ ಪ್ರಕ್ರಿಯೆಯುದ್ದಕ್ಕೂ ರಾಜ್ಯಗಳಿಂದ ಇವಿಎಮ್ಗಳ ತುಲನಾತ್ಮಕವಾಗಿ ಹೆಚ್ಚಿನ ವೈಫಲ್ಯದ ವರದಿಗಳು ಬರುತ್ತಲೇ ಇದ್ದವು ಮತ್ತು ಮತದಾನದ ದಿನಾಂಕಗಳು ಸಮೀಪಿಸುತ್ತಿದ್ದಂತೆ ಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರುಗಳು ಮತ್ತು ಚುನಾವಣಾ ಚಿಹ್ನೆಗಳನ್ನು ದಾಖಲಿಸುವಾಗಲೂ ಇದು ಮುಂದುವರಿದಿತ್ತು ಎನ್ನುವುದನ್ನು ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ನ ನಿರ್ದೇಶಕ ವೆಂಕಟೇಶ ನಾಯಕ್ ಅವರು ಆರ್ಟಿಐ ಕಾಯ್ದೆಯಡಿ ಪಡೆದುಕೊಂಡಿರುವ ದಾಖಲೆಗಳು ತೋರಿಸಿವೆ.
ವಾಸ್ತವದಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿಯ ಅಧಿಕಾರಿಗಳು ಹೆಚ್ಚಿನ ವೈಫಲ್ಯ ದರದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಯಂತ್ರಗಳನ್ನು ಒದಗಿಸುವಂತೆ ಚುನಾವಣಾ ಆಯೋಗವನ್ನು ಕೋರಿಕೊಂಡಿದ್ದರು. ನಿರ್ದಿಷ್ಟ ವೈಫಲ್ಯ ದರವನ್ನು ಹೆಚ್ಚು ಅಥವಾ ಸ್ವೀಕಾರಾರ್ಹ ಎಂದು ಚುನಾವಣಾ ಆಯೋಗವು ವ್ಯಾಖ್ಯಾನಿಸಿರದಿದ್ದರೂ ಇವಿಎಮ್ಗಳಲ್ಲಿ ಶೇ.5ರಷ್ಟು ವೈಫಲ್ಯ ದರವನ್ನು ಸ್ವೀಕಾರಾರ್ಹ ಎಂದು ಪರಿಗಣಿಸಲಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಎಫ್ಎಲ್ಸಿ ಸಂದರ್ಭದಲ್ಲಿ ಶೇ.30ರಷ್ಟು ವೈಫಲ್ಯ ದರಗಳು ವರದಿಯಾಗಿದ್ದವು.
ಇವಿಎಮ್ಗಳ ಅಸಮರ್ಪಕ ಕಾರ್ಯ ನಿರ್ವಹಣೆ ಅಥವಾ ಅವು ಕೆಟ್ಟು ಹೋಗುವುದು ಅವು ರಿಗ್ಗಿಂಗ್ ಅಥವಾ ತಿರುಚುವಿಕೆಗೆ ಮುಕ್ತವಾಗಿವೆ ಎನ್ನುವುದನ್ನು ಸೂಚಿಸುವುದಿಲ್ಲ. ಯಾವುದೇ ಯಂತ್ರದಂತೆ ಇವಿಎಮ್ಗಳೂ ಹಾಳಾಗುತ್ತವೆ. ಆದರೆ ಪದೇ ಪದೇ ಇವಿಎಮ್ ಯಂತ್ರಗಳು ಕೆಟ್ಟರೆ ಮತದಾನದಲ್ಲಿ ಅಡಚಣೆಗಳು, ಪ್ರಕ್ರಿಯೆಯ ವಿಳಂಬ ಗತಿಗೆ ಮತ್ತು ಮತದಾನದ ಪ್ರಮಾಣವು ಕುಸಿಯಲು ಕಾರಣವಾಗಬಹುದು.
ವಾಸ್ತವದಲ್ಲಿ ಹಲವಾರು ಅಧಿಕಾರಿಗಳು ಕಡತ ಟಿಪ್ಪಣಿಗಳಲ್ಲಿ ಇವಿಎಮ್ಗಳ ಹೆಚ್ಚಿನ ವೈಫಲ್ಯ ದರದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದರು ಮತ್ತು ಚುನಾಣಾ ಆಯೋಗವು ಇದಕ್ಕೆ ಕಾರಣಗಳನ್ನು ವಿವರಿಸಿ ವರದಿಗಳನ್ನು ಸಲ್ಲಿಸುವಂತೆ ಎರಡೂ ಇವಿಎಂ ತಯಾರಕರಿಗೆ ಸೂಚಿಸಿತ್ತು. ಈ ಸಮಸ್ಯೆಯು ಲೋಕಸಭಾ ಚುನಾವಣೆಗಳ ಬಳಿಕವೂ ಮುಂದುವರಿದಿತ್ತು ಮತ್ತು 2020ರಲ್ಲಿ ಬಿಹಾರ,2021ರಲ್ಲಿ ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಎಫ್ಎಲ್ಸಿ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಇಂತಹುದೇ ಸಮಸ್ಯೆಗಳ ಬಗ್ಗೆ ದೂರಿಕೊಂಡಿದ್ದರು ಎನ್ನುವುದನ್ನು ಆರ್ಟಿಐ ಉತ್ತರವು ಬಹಿರಂಗಗೊಳಿಸಿದೆ.