ಕಮಲ್ ನಾಥ್ ಬಿಜೆಪಿ ಸೇರ್ಪಡೆ ಸಾಧ್ಯತೆ ವದಂತಿ ಸುಳ್ಳು : ಕಾಂಗ್ರೆಸ್
ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ : ಕಮಲ್ ನಾಥ್ ಬಿಜೆಪಿ ಸೇರುವ ಸಾಧ್ಯತೆ ಕುರಿತ ವದಂತಿಯನ್ನು ‘‘ತಪ್ಪು ಮಾಹಿತಿ’’ ಎಂದು ಕಾಂಗ್ರೆಸ್ ಸೋಮವಾರ ತಳ್ಳಿ ಹಾಕಿದೆ. ಅಲ್ಲದೆ, ಈ ತಿಂಗಳಾಂತ್ಯದಲ್ಲಿ ರಾಜ್ಯ ಪ್ರವೇಶಿಸಲಿರುವ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯಾ ಯಾತ್ರೆ’ಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ಕಮಲ್ನಾಥ್ ಹಾಗೂ ಲೋಕಸಭೆ ಸದಸ್ಯರಾಗಿರುವ ಅವರ ಪುತ್ರ ನಕುಲ್ ನಾಥ್ ಅವರು ಆಡಳಿತಾರೂಢ ಬಿಜೆಪಿಗೆ ಸೇರುವ ವದಂತಿಯ ನಡುವೆ ಮಧ್ಯಪ್ರದೇಶದ ಉಸ್ತುವಾರಿಯಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
‘‘ಕಮಲ್ನಾಥ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಈ ಎಲ್ಲಾ ವದಂತಿಗಳನ್ನು ಬಿಜೆಪಿ ಹಾಗೂ ಮಾಧ್ಯಮಗಳು ಸೃಷ್ಟಿಸಿವೆ. ನಾನು ನಿನ್ನೆ ಹಾಗೂ ಮೊನ್ನೆ ಅವರೊಂದಿಗೆ ಮಾತನಾಡಿದ್ದೇನೆ. ಭಾರತ್ ಜೋಡೊ ನ್ಯಾಯ ಯಾತ್ರೆಯ ಸಿದ್ಧತೆ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ’’ ಎಂದು ಸಿಂಗ್ ಇಲ್ಲಿನ ಕಾಂಗ್ರೆಸ್ ನ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ನಾನು ನಾಳೆ ಭೋಪಾಲಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಶಾಸಕರು, ಸಂಸದರು, ವಿವಿಧ ಸಮಿತಿಗಳೊಂದಿಗೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಮಲ್ನಾಥ್ ಅವರು ಕೂಡ ಪಾಲ್ಗೊಳ್ಳಲಿದ್ದಾರೆ. ಯಾತ್ರೆಯ ಕುರಿತು ಅವರು ನೀಡುವ ಸಲಹೆಗಳನ್ನು ಪರಿಗಣಿಸಲಾಗುವುದು. ಯಾತ್ರೆ ಮಧ್ಯಪ್ರದೇಶ ಪ್ರವೇಶಿಸಿದ ಸಂದರ್ಭ ಕಮಲ್ನಾಥ್ ಅವರು ಪಾಲ್ಗೊಳ್ಳಲಿದ್ದಾರೆ’’ ಎಂದು ಅವರು ಹೇಳಿದರು.
ಕಮಲ್ನಾಥ್ ಹಾಗೂ ಅವರ ಪುತ್ರ ನಕುಲ್ ನಾಥ್ ಬಿಜೆಪಿ ಸೇರುತ್ತಾರೆ ಎಂಬುದು ವದಂತಿ ಎಂದು ಸಿಂಗ್ ಪುನರುಚ್ಛರಿಸಿದರು. ಬಿಜೆಪಿ ಯಾವಾಗಲೂ ತಪ್ಪು ಮಾಹಿತಿ ಹಾಗೂ ತಪ್ಪು ಸುದ್ದಿಯನ್ನು ಹರಡಲು ಪ್ರಯತ್ನಿಸುತ್ತದೆ ಎಂದರು.
ಈ ತಿಂಗಳಾಂತ್ಯದಲ್ಲಿ ರಾಜ್ಯ ಪ್ರವೇಶಿಸಲಿರುವ ನ್ಯಾಯ ಯಾತ್ರೆಯಲ್ಲಿ ಕಮಲ್ನಾಥ್ ಅವರು ಶೇ. ನೂರಕ್ಕೆ ನೂರರಷ್ಟು ಪಾಲ್ಗೊಳ್ಳಲಿದ್ದಾರೆ. ನ್ಯಾಯ ಯಾತ್ರೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಸಿಂಗ್ ತಿಳಿಸಿದರು.
ಛಿಂದ್ವಾರದ ಸಂಸದ ನಕುಲ್ ನಾಥ್ ಅವರ ಬಗ್ಗೆ ಪ್ರಶ್ನಿಸಿದಾಗ ಸಿಂಗ್, ಅವರು ಪಕ್ಷದ ಸಂಸದ. ಅವರು ಕೂಡ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.