ಡಾಲರ್ ಎದುರು ಸಾರ್ವಕಾಲಿಕ ಪತನ ಕಂಡ ರೂಪಾಯಿ
file photo
ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಸಾರ್ವಕಾಲಿಕ ಪತನ ಕಂಡಿದ್ದು, ಇದೇ ಮೊದಲ ಬಾರಿಗೆ ಪ್ರತಿ ಡಾಲರ್ ಗೆ 84 ರೂಪಾಯಿಗೆ ಕುಸಿದಿದೆ. ಇದು ಗುರುವಾರ ಮುಕ್ತಾಯಕ್ಕೆ ಇದ್ದ ಬೆಲೆಯಾದ 83.94 ರೂಪಾಯಿಗಳಿಗೆ ಹೋಲಿಸಿದರೆ 12 ಪೈಸೆಯಷ್ಟು ಕಡಿಮೆ. 83.98 ರೂಪಾಯಿಯೊಂದಿಗೆ ದಿನದ ವಹಿವಾಟು ಅರಂಭವಾದರೆ, ಮಧ್ಯಂತರ ಅವಧಿಯಲ್ಲಿ ದಾಖಲೆ ಕನಿಷ್ಠ ಮಟ್ಟವನ್ನು ತಲುಪಿ 84.07 ರೂಪಾಯಿ ಆಯಿತು.
ಭಾರತೀಯ ರಿಸರ್ವ್ ಬ್ಯಾಂಕ್ ಈ ಮಿತಿಯನ್ನು ಎರಡು ತಿಂಗಳಿನಿಂದ ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಈ ಕರೆನ್ಸಿ ಮಾರುಕಟ್ಟೆಯಲ್ಲಿ ತೀಕ್ಷ್ಣ ಪ್ರಮಾಣದ ಚಂಚಲತೆಯನ್ನು ತಡೆಯುವ ಉದ್ದೇಶದಿಂದ ಶುಕ್ರವಾರ ಆರ್ಬಿಐ ಮಧ್ಯಪ್ರವೇಶ ಮಾಡಿದೆ.
ಕಾರ್ಯತಂತ್ರದ ಅಂಗವಾಗಿ 84 ರೂಪಾಯಿ ಮಿತಿಯನ್ನು ದಾಟಲು ಆರ್ಬಿಐ ಅವಕಾಶ ನೀಡಿದೆ ಎನ್ನುವುದು ಕೆಲ ಡೀಲರ್ಗಳ ಭಾವನೆ. ಇರಾನ್-ಇಸ್ರೇಲ್ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಲ್ಲಿ ಹೆಚ್ಚಿನ ಚಂಚಲತೆ ಸೃಷ್ಟಿಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈ ಅವಕಾಶ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕದ ಫೆಡರಲ್ ರಿಸರ್ವ್, ನವೆಂಬರ್ನಲ್ಲಿ 50 ಮೂಲ ಅಂಶಗಳಷ್ಟು ದರವನ್ನು ಕಡಿತಗೊಳಿಸುವ ಮಬ್ಬು ನಿರೀಕ್ಷೆಯ ಹಿನ್ನೆಲೆಯಲ್ಲಿ ಡಾಲರ್ಗಳ ಬಲವರ್ಧನೆಯು, ರೂಪಾಯಿ ದುರ್ಬಲತೆಗೆ ಮತ್ತಷ್ಟು ಕೊಡುಗೆ ನೀಡಿದೆ.
ರೂಪಾಯಿಯ ಮೌಲ್ಯವನ್ನು 84ರ ಮಟ್ಟ ಮೀರಲು ಅವಕಾಶ ನೀಡುವ ಮೂಲಕ ಮುಂದಿನ ವಾರದ ಸಂಭಾವ್ಯ ಚಂಚಲತೆ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಲು ಇದು ಆರ್ಬಿಐಗೆ ಅವಕಾಶ ಕಲ್ಪಿಸಲಿದೆ. ಕಳೆದ ಎರಡು ತಿಂಗಳುಗಳಲ್ಲಿ ಇತರ ಏಷ್ಯನ್ ಕರೆನ್ಸಿಗಳು ಶೇಕಡ 5ರಷ್ಟು ಬಲವರ್ಧನೆ ಪಡೆದಿದ್ದರೆ, ಭಾರತದ ರೂಪಾಯಿ ಸ್ಥಿರತೆ ಕಾಪಾಡಿಕೊಂಡಿತ್ತು. ಇದು ಕರೆನ್ಸಿ ವ್ಯತ್ಯಯವನ್ನು ನಿರ್ವಹಿಸುವಲ್ಲಿ ಆರ್ಬಿಐನ ಸಕ್ರಿಯ ಪಾತ್ರವನ್ನು ಬಿಂಬಿಸುತ್ತದೆ.