ಕಡಿಮೆ ಬಡತನ ಮಟ್ಟಗಳನ್ನು ಹೊಂದಿರುವ ರಾಜ್ಯಗಳಿಗಿಂತ ಕಡಿಮೆ ನರೇಗಾ ನಿಧಿಯನ್ನು ಬಳಸಿರುವ ಬಿಹಾರ ಮತ್ತು ಉತ್ತರ ಪ್ರದೇಶ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಡಿಮೆ ಬಡತನ ಮಟ್ಟಗಳನ್ನು ಹೊಂದಿರುವ ತಮಿಳುನಾಡು, ಕೇರಳ ರಾಜ್ಯಗಳಿಗಿಂತ ಬಡತನ ಪ್ರಮಾಣ ಹೆಚ್ಚಿರುವ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳೇ ನರೇಗಾ ನಿಧಿಯನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿವೆ ಎಂದು ಸೋಮವಾರ ಮಂಡನೆಯಾದ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ ಎಂದು newindianexpress.com ವರದಿ ಮಾಡಿದೆ.
"ಕಡಿಮೆ ತಲಾವಾರು ಆದಾಯ ಹಾಗೂ ಹೆಚ್ಚು ಬಡತನದ ಮಟ್ಟವನ್ನು ಹೊಂದಿರುವ ರಾಜ್ಯಗಳು ಪದೇ ಪದೇ ಕಳಪೆ ಆಡಳಿತವನ್ನು ಹೊಂದಿವೆ. ಆ ಮೂಲಕ ಆದ ಕೆಲಸಗಳಿಗೆ ಕಡಿಮೆ ಪ್ರಮಾಣದ ನಿಧಿಯನ್ನು ಬಳಸಿಕೊಳ್ಳುತ್ತಿವೆ. ಇದರಿಂದ ಗ್ರಾಮೀಣ ಭಾಗದ ಬಡವರಿಗೆ ತಲಾವಾರು ಆದಾಯಕ್ಕನುಗುಣವಾಗಿ ಕಡಿಮೆ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ" ಎಂದು ಸಮೀಕ್ಷೆಯಲ್ಲಿ ಬೊಟ್ಟು ಮಾಡಲಾಗಿದೆ.
2024ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಬಡವರ ಜನಸಂಖ್ಯೆಯ ಪೈಕಿ ಶೇ. 1ಕ್ಕಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ತಮಿಳುನಾಡು ರಾಜ್ಯವು, ಬಿಡುಗಡೆಯಾಗಿರುವ ಎಲ್ಲ ನರೇಗಾ ನಿಧಿಯ ಪೈಕಿ ಶೇ. 15ರಷ್ಟನ್ನು ಬಳಸಿಕೊಂಡಿದ್ದರೆ, ಶೇ. 0.1ಕ್ಕಿಂತಲೂ ಕಡಿಮೆ ಬಡತನ ಪ್ರಮಾಣ ಹೊಂದಿರುವ ಕೇರಳ ರಾಜ್ಯವು ಒಟ್ಟು ನರೇಗಾ ನಿಧಿಯ ಪೈಕಿ ಶೇ. 4ರಷ್ಟು ಬಳಸಿಕೊಂಡಿದೆ. ಈ ಎರಡೂ ರಾಜ್ಯಗಳು ಒಟ್ಟಾಗಿ 51 ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ, ಒಟ್ಟಾರೆ ಶೇ. 45ರಷ್ಟು (ಕ್ರಮವಾಗಿ ಶೇ. 20 ಹಾಗೂ ಶೇ. 25) ಬಡತನ ಹೊಂದಿರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಒಟ್ಟಾರೆ ಶೇ. 17ರಷ್ಟು (ಕ್ರಮವಾಗಿ ಶೇ. 6 ಮತ್ತು ಶೇ. 11) ನರೇಗಾ ನಿಧಿಯನ್ನು ಮಾತ್ರ ಬಳಸಿಕೊಂಡಿವೆ ಹಾಗೂ ಎರಡೂ ರಾಜ್ಯಗಳು ಒಟ್ಟಾಗಿ 53 ಮಾನವ ದಿನಗಳ ಉದ್ಯೋಗವನ್ನು ಮಾತ್ರ ಒದಗಿಸಿವೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ನರೇಗಾ ಸಂಘರ್ಷ್ ಮೋರ್ಚಾದ ನಾಯಕ ನಿಖಿಲ್ ಡೇ, "ಉತ್ತಮ ಆಡಳಿತವನ್ನು ಹೊಂದಿರುವ ರಾಜ್ಯಗಳು ನರೇಗಾ ನಿಧಿಯನ್ನೂ ಉತ್ತಮವಾಗಿ ಬಳಸಿಕೊಳ್ಳಬಲ್ಲವು ಎಂಬುದನ್ನು ಆರ್ಥಿಕ ಸಮೀಕ್ಷಾ ವರದಿಯು ಹೇಳುತ್ತಿದೆ. ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳು ಕಳಪೆ ಆಡಳಿತ ವ್ಯವಸ್ಥೆಯನ್ನು ಹೊಂದಿರುವುದರಿಂದ, ಶೇ. 17ರಷ್ಟು ನರೇಗಾ ನಿಧಿಯನ್ನು ಮಾತ್ರ ಬಳಸಿಕೊಂಡಿವೆ. ಇದರರ್ಥ, ಆ ರಾಜ್ಯಗಳಲ್ಲಿ ಗ್ರಾಮೀಣ ಆರ್ಥಿಕ ಬಿಕ್ಕಟ್ಟು ಇಲ್ಲವೆಂದಲ್ಲ" ಎಂದು ಹೇಳಿದ್ದಾರೆ.