ಬಾಹ್ಯಾಕಾಶ ನಿಲ್ದಾಣದ ಜಂಟಿ ಯೋಜನೆ ಮುಂದುವರಿಸಲು ರಶ್ಯ, ಅಮೆರಿಕ ಸಮ್ಮತಿ
ಐಎಸ್ಎಸ್ | Photo: X \ @BeateLandefeld
ಮಾಸ್ಕೋ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ಗೆ ಸಿಬ್ಬಂದಿಗಳನ್ನು ರವಾನಿಸುವ ಜಂಟಿ ಯೋಜನೆಯನ್ನು ಕನಿಷ್ಟ 2025ರವರೆಗೆ ಮುಂದುವರಿಸಲು ರಶ್ಯ ಮತ್ತು ಅಮೆರಿಕದ ಬಾಹ್ಯಾಕಾಶ ಏಜೆನ್ಸಿಗಳು ಸಮ್ಮತಿಸಿವೆ ಎಂದು ರಶ್ಯದ ಬಾಹ್ಯಾಕಾಶ ಸಂಸ್ಥೆ ರೊಸ್ಕೊಸ್ಮೋಸ್ ಗುರುವಾರ ಹೇಳಿದೆ.
ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಬಳಿಕ ರಶ್ಯ-ಅಮೆರಿಕ ದ್ವಿಪಕ್ಷೀಯ ಸಹಕಾರ ಸಂಬಂಧ ಹಳಸಿದ್ದರೂ, ಒಂದೇ ಬಾಹ್ಯಾಕಾಶ ನೌಕೆಯಲ್ಲಿ ವಿವಿಧ ದೇಶಗಳ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ `ಕ್ರಾಸ್ ಫ್ಲೈಟ್ಸ್' ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ರಶ್ಯ ಮತ್ತು ಅಮೆರಿಕ ನಡುವಿನ ಸಹಕಾರ ಸಂಬಂಧ ಮುಂದುವರಿದಿದೆ. 1998ರಲ್ಲಿ ರಶ್ಯ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಿದ್ದ ಸಂದರ್ಭ ಐಎಸ್ಎಸ್ಗೆ ಚಾಲನೆ ನೀಡಲಾಗಿತ್ತು. ಅಮೆರಿಕ, ರಶ್ಯ, ಯುರೋಪ್, ಕೆನಡಾ ಮತ್ತು ಜಪಾನ್ ದೇಶಗಳ ಜಂಟಿ ಯೋಜನೆಯಾದ ಐಎಸ್ಎಸ್ ಪ್ರಯೋಗಾಲಯವನ್ನು 2024ರವರೆಗೆ ಬಳಸುವ ಬಗ್ಗೆ ಒಪ್ಪಂದ ಆಗಿತ್ತು. ಇದೀಗ 2025ರವರೆಗೆ ಒಪ್ಪಂದ ಮುಂದುವರಿಯಲಿದೆ. ಐಎಸ್ಎಸ್ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ರಶ್ಯದ ಬಾಹ್ಯಾಕಾಶ ಸಂಸ್ಥೆ ಹೇಳಿಕೆ ನೀಡಿದೆ.