ವಿಶ್ವಸಂಸ್ಥೆಯ ಭಯೋತ್ಪಾದನೆ ವಿರೋಧಿ ಒಪ್ಪಂದದ ಅಂಶಗಳನ್ನು ರಶ್ಯ ಉಲ್ಲಂಘಿಸಿದೆ : ಅಂತರಾಷ್ಟ್ರೀಯ ನ್ಯಾಯಾಲಯ ತೀರ್ಪು
ಪರಿಹಾರ ಕೋರಿದ ಉಕ್ರೇನ್ ಅರ್ಜಿ ತಿರಸ್ಕೃತ
Photo: NDTV
ಹೇಗ್: ಪೂರ್ವ ಉಕ್ರೇನ್ ನಲ್ಲಿ ರಶ್ಯ ಪರ ಪ್ರತ್ಯೇಕತಾವಾದಿ ಗುಂಪುಗಳಿಗೆ ಹಣಕಾಸಿನ ನೆರವಿನ ಆರೋಪಗಳ ಬಗ್ಗೆ ತನಿಖೆ ನಡೆಸದೆ ರಶ್ಯವು ವಿಶ್ವಸಂಸ್ಥೆಯ ಭಯೋತ್ಪಾದನೆ ವಿರೋಧಿ ಒಪ್ಪಂದದ ಕೆಲವು ಅಂಶಗಳನ್ನು ರಶ್ಯ ಉಲ್ಲಂಘಿಸಿದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ಹೇಳಿದೆ.
ಆದರೆ ಪ್ರತ್ಯೇಕತಾವಾದಿಗಳಿಗೆ ರಶ್ಯ ಹಣಕಾಸು ನೆರವು ನೀಡುತ್ತಿರುವುದರಿಂದ ಅದನ್ನು ಭಯೋತ್ಪಾದಕ ರಾಷ್ಟ್ರವೆಂದು ನಿಯೋಜಿಸಬೇಕು ಮತ್ತು ತನಗೆ ರಶ್ಯವು ಪರಿಹಾರ ನೀಡಬೇಕೆಂಬ ಉಕ್ರೇನ್ ನ ಕೋರಿಕೆಯನ್ನು ತಿರಸ್ಕರಿಸಿದೆ.
2014ರ ಜುಲೈ 17ರಂದು ಪೂರ್ವ ಉಕ್ರೇನ್ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಮಲೇಶ್ಯಾ ಏರ್ಲೈನ್ ವಿಮಾನವನ್ನು ಹೊಡೆದುರುಳಿಸಿದ ಪ್ರಕರಣದಲ್ಲಿ ರಶ್ಯವನ್ನು ಹೊಣೆಯಾಗಿಸಬೇಕು ಎಂಬ ಉಕ್ರೇನ್ ವಾದವನ್ನು ಐಸಿಜೆ ತಳ್ಳಿಹಾಕಿದೆ. ಇದೇ ಸಂದರ್ಭ, 2014ರಲ್ಲಿ ಉಕ್ರೇನ್ ನ ಕ್ರಿಮಿಯಾ ಪ್ರಾಂತವನ್ನು ವಶಪಡಿಸಿಕೊಂಡ ಬಳಿಕ ರಶ್ಯವು ಆ ಪ್ರಾಂತದಲ್ಲಿ ಉಕ್ರೇನ್ ಭಾಷೆಯಲ್ಲಿ ಶಿಕ್ಷಣ ಪಡೆಯುವುದನ್ನು ನಿರ್ಬಂಧಿಸುವ ಮೂಲಕ ತಾರತಮ್ಯ ವಿರೋಧಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಐಸಿಜೆಯ ಈ ತೀರ್ಪು ಉಕ್ರೇನ್ಗೆ ಹಿನ್ನಡೆಯಾಗಿದೆ. ಎರಡೂ ಉಲ್ಲಂಘನೆಗಳಿಗೆ ಪರಿಹಾರ ನೀಡುವಂತೆ ರಶ್ಯಕ್ಕೆ ನಿರ್ದೇಶನ ನೀಡಬೇಕೆಂಬ ಉಕ್ರೇನ್ ವಾದವನ್ನು ಪರಿಗಣಿಸದ ಐಸಿಜೆ, ಒಪ್ಪಂದವನ್ನು ಅನುಸರಿಸುವಂತೆ ರಶ್ಯಕ್ಕೆ ಆದೇಶಿಸಿತು. ಪೂರ್ವ ಉಕ್ರೇನ್ ನಲ್ಲಿ ರಶ್ಯ ಪರ ಪ್ರತ್ಯೇಕತಾವಾದಿಗಳಿಗೆ ರಶ್ಯ ನೀಡುತ್ತಿದ್ದ ನೆರವು 2022ರಲ್ಲಿ ಉಕ್ರೇನ್ ಮೇಲೆ ರಶ್ಯ ಪೂರ್ಣಪ್ರಮಾಣದ ದಾಳಿ ನಡೆಸಲು ಪ್ರೇರಣೆಯಾಗಿದೆ. ಈ ಸಂಘರ್ಷದಲ್ಲಿ ಸಂಕಷ್ಟಕ್ಕೀಡಾದ ನಾಗರಿಕರಿಗೆ ಹಾಗೂ ಮಲೇಶ್ಯಾ ವಿಮಾನ ದುರಂತದ ಸಂತ್ರಸ್ತರಿಗೆ ರಶ್ಯ ಪರಿಹಾರ ನೀಡುವಂತೆ ಆದೇಶಿಸಬೇಕೆಂದು ಉಕ್ರೇನ್ ಕೋರಿತ್ತು.
ಈ ತೀರ್ಪು 2022ರ ಉಕ್ರೇನ್ ಮೇಲಿನ ರಶ್ಯ ಆಕ್ರಮಣಕ್ಕೂ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದ್ದು. ಉಕ್ರೇನ್ ಯುದ್ಧದ ಬಗ್ಗೆ ತೀರ್ಪು ನೀಡುವುದು ತನ್ನ ನ್ಯಾಯವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಐಸಿಜೆ ಶುಕ್ರವಾರ ನಿರ್ಧರಿಸಲಿದೆ.
ನಗದು ವರ್ಗಾವಣೆ ಮಾತ್ರ ಪರಿಗಣನೆ: ಐಸಿಜೆ
ಭಯೋತ್ಪಾದನೆಗೆ ಹಣಕಾಸು ಒದಗಿಸುವ ಅಂತರಾಷ್ಟ್ರೀಯ ಸಮಾವೇಶದ ನಿಯಮಗಳ ಅಡಿಯಲ್ಲಿ ಆಪಾದಿತ ಭಯೋತ್ಪಾದಕ ಗುಂಪುಗಳಿಗೆ ಬೆಂಬಲವಾಗಿ ನಗದು ವರ್ಗಾವಣೆಯನ್ನು ಮಾತ್ರ ಪರಿಗಣಿಸಬಹುದು ಎಂದು ಐಸಿಜೆ ಹೇಳಿದೆ.
`ಇದು ಶಸ್ತ್ರಾಸ್ತ್ರಗಳು ಅಥವಾ ತರಬೇತಿ ಶಿಬಿರಗಳು ಸೇರಿದಂತೆ ಭಯೋತ್ಪಾದನಾ ಕೃತ್ಯಗಳನ್ನು ಬಳಸುವ ಸಾಧನಗಳನ್ನು ಒಳಗೊಂಡಿಲ್ಲ. ಪರಿಣಾಮವಾಗಿ ಉಕ್ರೇನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಶಸ್ತ್ರ ಗುಂಪುಗಳಿಗೆ ಆಪಾದಿತ ಶಸ್ತ್ರಾಸ್ತ್ರ ಪೂರೈಕೆ ನಿಯಮಗಳ ವ್ಯಾಪ್ತಿಯಡಿ ಬರುವುದಿಲ್ಲ ' ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.