ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಯುಎಸ್ ಸೆನೆಟರ್ ಅಭಿಪ್ರಾಯಕ್ಕೆ ಉತ್ತರವಾಗಿ ಶಾಯಿ ಗುರುತಿನ ತನ್ನ ಬೆರಳನ್ನು ತೋರಿಸಿದ ಎಸ್. ಜೈಶಂಕರ್
ಮ್ಯೂನಿಚ್ ಭದ್ರತಾ ಸಮ್ಮೇಳನ

ಎಸ್. ಜೈಶಂಕರ್ | PC : PTI
ಹೊಸದಿಲ್ಲಿ: 2025ರ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಜಾಗತಿಕವಾಗಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬ ಪಾಶ್ಚಾತ್ಯ ಅಭಿಪ್ರಾಯಕ್ಕೆ ಶಾಯಿ ಗುರುತಿನ ಬೆರಳನ್ನು ತೋರಿಸುವ ಮೂಲಕ ತನ್ನದೇ ಆದ ರೀತಿಯಲ್ಲಿ ಉತ್ತರಿಸಿ,ಭಾರತದ ಪ್ರಜಾಪ್ರಭುತ್ವವನ್ನು ಎತ್ತಿ ತೋರಿಸಿದ್ದಾರೆ.
ಶುಕ್ರವಾರ ನಾರ್ವೆ ಪ್ರಧಾನಿ ಜೋನಾಸ್ ಗಹ್ರ್ ಸ್ಟೋರ್,ಅಮೆರಿಕದ ಸೆನೆಟರ್ ಎಲಿಸಾ ಸ್ಲಾಟ್ಕಿನ್ ಮತ್ತು ವಾರ್ಸಾ ಮೇಯರ್ ರಫಲ್ ಟ್ರಾಜಾಸ್ಕೋವ್ಸ್ ಅವರೊಂದಿಗೆ ‘ಲಿವ್ ಟು ಅನದರ್ ಡೇ:ಫೋರ್ಟಿಫೈಯಿಂಗ್ ಡೆಮಾಕ್ರಟಿಕ್ ರೆಸಿಲಿಯನ್ಸ್’ ವಿಷಯ ಕುರಿತು ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿದ್ದ ಜೈಶಂಕರ್ ಪ್ರಜಾಪ್ರಭುತ್ವ ಕುರಿತು ತನ್ನ ಅಭಿಪ್ರಾಯವನ್ನು ಮಂಡಿಸಿದರು.
ಪಾಶ್ಚಾತ್ಯ ಪ್ರಜಾಪ್ರಭುತ್ವದ ಬಗ್ಗೆ ತನ್ನ ಅಭಿಪ್ರಾಯಗಳ ಕುರಿತು ಪ್ರಶ್ನೆಗೆ ಜೈಶಂಕರ್, ‘ತುಲನಾತ್ಮಕವಾಗಿ ನಿರಾಶಾವಾದಿಗಳ ಗುಂಪಿನಲ್ಲಿ ನಾನು ಆಶಾವಾದಿಯಾಗಿ ಕಾಣಿಸಿಕೊಂಡಿದ್ದೇನೆ. ನಾನು ನನ್ನ ಬೆರಳನ್ನು ಮೇಲಕ್ಕೆತ್ತುವ ಮುನ್ನ ಆರಂಭಿಸುತ್ತಿದ್ದೇನೆ .ಇದನ್ನು ಕೆಟ್ಟದಾಗಿ ಭಾವಿಸಬೇಡಿ,ಇದು ತೋರುಬೆರಳು. ನನ್ನ ಉಗುರಿನ ಮೇಲೆ ನೀವು ಶಾಯಿ ಗುರುತನ್ನು ನೋಡುತ್ತಿದ್ದೀರಿ,ಇದು ಇತ್ತೀಚಿಗಷ್ಟೇ ಮತ ಚಲಾಯಿಸಿದ ವ್ಯಕ್ತಿಯ ಗುರುತು. ನನ್ನ ರಾಜ್ಯದಲ್ಲಿ ಈಗಷ್ಟೇ ಚುನಾವಣೆ ಮುಗಿದಿದೆ. ಕಳೆದ ವರ್ಷ ನಮ್ಮಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು’ ಎಂದು ಹೇಳಿದರು.
ಭಾರತದಲ್ಲಿ ಚುನಾವಣೆಗಳಲ್ಲಿ ಸುಮಾರು ಮೂರನೇ ಎರಡರಷ್ಟು ಅರ್ಹ ಮತದಾರರು ಹೇಗೆ ಮತ ಚಲಾಯಿಸಿದ್ದರು ಎನ್ನುವುದನ್ನು ಎತ್ತಿ ತೋರಿಸಿದ ಜೈಶಂಕರ್,‘ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 90 ಕೋಟಿ ಮತದಾರರ ಪೈಕಿ 70 ಕೋಟಿ ಜನರು ಮತಗಳನ್ನು ಚಲಾಯಿಸಿದ್ದರು. ನಾವು ಒಂದೇ ದಿನದಲ್ಲಿ ಮತಗಳ ಎಣಿಕೆಯನ್ನು ಮುಗಿಸುತ್ತೇವೆ ’ ಎಂದರು.
ಜಾಗತಿಕವಾಗಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬ ದೃಷ್ಟಿಕೋನಕ್ಕೆ ಭಿನ್ನವಾದ ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಂಡ ಅವರು,‘ನಮ್ಮ ದೇಶದಲ್ಲಿ ಚುನಾವಣಾ ಫಲಿತಾಂಶಗಳು ಘೋಷಣೆಯಾದ ಬಳಿಕ ಯಾರೂ ಆ ಬಗ್ಗೆ ವಿವಾದವನ್ನು ಎತ್ತುವುದಿಲ್ಲ ಮತ್ತು ಆಧುನಿಕ ಯುಗದಲ್ಲಿ ನಾವು ಮತದಾನ ಮಾಡಲು ಆರಂಭಿಸಿದಾಗಿನಿಂದ ದಶಕಗಳ ಹಿಂದೆ ಮತ ಚಲಾಯಿಸುತ್ತಿದ್ದವರಿಗಿಂತ ಶೇ.20ರಷ್ಟು ಅಧಿಕ ಮತದಾರರು ಇಂದು ಮತಗಳನ್ನು ಚಲಾಯಿಸುತ್ತಿದ್ದಾರೆ. ಹೀಗಾಗಿ ಜಾಗತಿಕವಾಗಿ ಏನೋ ಒಂದು ರೀತಿಯಲ್ಲಿ ಪ್ರಜಾಪ್ರಭುತ್ವ ತೊಂದರೆಯಲ್ಲಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ನಾವು ಚೆನ್ನಾಗಿಯೇ ಬದುಕುತ್ತಿದ್ದೇವೆ. ನಮ್ಮ ಪ್ರಜಾಪ್ರಭುತ್ವ ಸಾಗುತ್ತಿರುವ ದಿಕ್ಕಿನ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ ಮತು ನಮಗೆ ನಿಜವಾಗಿಯೂ ಪ್ರಜಾಪ್ರಭುತ್ವ ಸಿಕ್ಕಿದೆ’ ಎಂದರು.
ಪ್ರಜಾಪ್ರಭುತ್ವವು ಆಹಾರವನ್ನು ಮೇಜಿನ ಮೇಲೆ ತಂದಿಡುವುದಿಲ್ಲ ಎಂದ ಸ್ಲಾಟ್ಕಿನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೈಶಂಕರ್,‘ವಾಸ್ತವದಲ್ಲಿ ನಮ್ಮ ದೇಶದಲ್ಲಿ ಹಾಗೆಯೇ ಆಗುತ್ತಿದೆ. ಇಂದು ನಾವು ಪ್ರಜಾಪ್ರಭುತ್ವವಾದಿಗಳಾಗಿರುವುದರಿಂದ ನಾವು 80 ಕೋಟಿ ಜನರಿಗೆ ಪೋಷಕಾಂಶ ಬೆಂಬಲ ಮತ್ತು ಆಹಾರವನ್ನು ಒದಗಿಸುತ್ತಿದ್ದೇವೆ ’ಎಂದರು.