ಅಮೆರಿಕದಿಂದ ಭಾರತೀಯರ ಗಡಿಪಾರು ಕುರಿತು ದಾರಿತಪ್ಪಿಸುವ ಹೇಳಿಕೆ: ಎಸ್.ಜೈಶಂಕರ್ ವಿರುದ್ಧ ಟಿಎಂಸಿ ಸಂಸದೆಯಿಂದ ಹಕ್ಕುಚ್ಯುತಿ ನಿರ್ಣಯ

ಎಸ್.ಜೈಶಂಕರ್ | PTI
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಅವರು ಅಮೆರಿಕದಿಂದ ಭಾರತೀಯರ ಗಡಿಪಾರುಗಳ ಕುರಿತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು ಸಲ್ಲಿಸಿದ್ದಾರೆ.
ಗಡಿಪಾರುಗೊಂಡವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಿಲ್ಲ ಎಂದು ಜೈಶಂಕರ್ ಭರವಸೆ ನೀಡಿದ್ದರೂ ಫೆ.16ರಂದು ಅಮೆರಿಕದಿಂದ ಗಡಿಪಾರುಗೊಂಡಿದ್ದ ಎರಡನೇ ತಂಡದ ಭಾರತೀಯ ಪ್ರಜೆಗಳಿಗೂ ಸಂಕೋಲೆಗಳನ್ನು ತೊಡಿಸಲಾಗಿತ್ತು ಎಂದು ಘೋಷ್ ಆರೋಪಿಸಿದ್ದಾರೆ.
ಫೆ.5ರಂದು ಅಮೆರಿಕದಿಂದ ಗಡಿಪಾರುಗೊಂಡು ಮಿಲಿಟರಿ ವಿಮಾನದಲ್ಲಿ ಅಮೃತಸರಕ್ಕೆ ಆಗಮಿಸಿದ್ದ 104 ಭಾರತೀಯರಿಗೆ ಹಿಂದಿನ ಕಾರ್ಯವಿಧಾನದಂತೆ ಸಂಕೋಲೆಗಳನ್ನು ತೊಡಗಿಸಲಾಗಿತ್ತು ಎಂದು ಫೆ.6ರಂದು ರಾಜ್ಯಸಭೆಯಲ್ಲಿ ತಿಳಿಸಿದ್ದ ಜೈಶಂಕರ್,ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯು ವಿಮಾನದಲ್ಲಿ ಗಡಿಪಾರು ಮಾಡಲು 2012ರಿಂದ ಜಾರಿಯಲ್ಲಿರುವ ಕಾರ್ಯವಿಧಾನವನ್ನು ಬಳಸುತ್ತಿದ್ದು,ಇದು ಕೈಕೋಳಗಳು ಮತ್ತು ಸಂಕೋಲೆಗಳನ್ನು ತೊಡಗಿಸಲು ಅವಕಾಶವನ್ನು ಒದಗಿಸಿದೆ. ಮಕ್ಕಳು ಮತ್ತು ಮಹಿಳೆಯರಿಗೆ ಇವುಗಳನ್ನು ಬಳಸಿರಲಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಭಾರತ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಗಡಿಪಾರುಗೊಂಡು ಭಾರತಕ್ಕೆ ಮರಳುವವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಅಧಿಕಾರಿಗಳು ಅಮೆರಿಕದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದ್ದರು.
ನಂತರದ ಯಾನಗಳಲ್ಲಿ ಗಡಿಪಾರುಗೊಂಡವರ ಹೇಳಿಕೆಗಳನ್ನು ತನ್ನ ಹಕ್ಕುಚ್ಯುತಿ ನಿರ್ಣಯದಲ್ಲಿ ಉಲ್ಲೇಖಿಸಿರುವ ಘೋಷ್,ಇವು ಸದನದಲ್ಲಿ ಸಚಿವರು ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.
ಅಮೆರಿಕದ ಅಧಿಕಾರಿಗಳು ಓರ್ವ ಸಿಖ್ ವ್ಯಕ್ತಿಯ ಟರ್ಬನ್ನ್ನು ಬಲವಂತದಿಂದ ತೆಗೆಸಿ ಅದನ್ನು ಕಸದ ಬುಟ್ಟಿಯಲ್ಲಿ ಎಸೆದಿದ್ದರು. ಇದು ಸಿಖ್ ಧಾರ್ಮಿಕ ಭಾವನೆಗಳು ಮತ್ತು ಹಕ್ಕುಗಳ ವಿರುದ್ಧ ತೀವ್ರ ಅವಹೇಳನಕರ ಕೃತ್ಯವಾಗಿತ್ತು ಎಂದು ಕಿಡಿಕಾರಿರುವ ಘೋಷ್,ವಿಮಾನಯಾನದ ಸಂದರ್ಭದಲ್ಲಿ ಗಡಿಪಾರುಗೊಂಡವರಿಗೆ ಚಿತ್ರಹಿಂಸೆ ನೀಡಲಾಗಿತ್ತು,ಸಾಕಷ್ಟು ಆಹಾರವನ್ನು ಒದಗಿಸಿರಲಿಲ್ಲ,ಪೂರೈಸಿದ್ದ ಆಹಾರದಲ್ಲಿಯೂ ಕೆಲವು ಅರೆಬೆಂದಿದ್ದವು ಎಂದು ಆರೋಪಿಸಿದ್ದಾರೆ.
ರಾಜ್ಯಸಭೆಯಲ್ಲಿ ಜೈಶಂಕರ್ ಅವರ ಹೇಳಿಕೆಗಳು ದಾರಿ ತಪ್ಪಿಸುವ ಮತ್ತು ಅಪೂರ್ಣ ಮಾಹಿತಿಗಳಿಂದ ಕೂಡಿದ್ದವು,ಸಂಸದೀಯ ವಿಶೇಷ ಸವಲತ್ತುಗಳನ್ನು ಉಲ್ಲಂಘಿಸಿದ್ದವು ಮತ್ತು ಸದನದಲ್ಲಿ ಮಾಹಿತಿಯುಕ್ತ ಚರ್ಚೆಗೆ ಅಡ್ಡಿಯನ್ನುಂಟು ಮಾಡಿದ್ದವು ಎಂದೂ ಅವರು ಪ್ರತಿಪಾದಿಸಿದ್ದಾರೆ.
ಅಮೆರಿಕವು ಫೆಬ್ರವರಿಯಲ್ಲಿ ಮೂರು ವಿಮಾನಗಳಲ್ಲಿ ಒಟ್ಟು 332 ಅಕ್ರಮ ಭಾರತೀಯ ವಲಸಿಗರನ್ನು ಗಡಿಪಾರು ಮಾಡಿದೆ.